ಹೈದರಾಬಾದ್ (ತೆಲಂಗಾಣ): ರಾಮೋಜಿ ಗ್ರೂಪ್ ವಿರುದ್ಧ ಜಿ.ಯೂರಿ ರೆಡ್ಡಿ ಎಂಬವರು ಮಾಡಿರುವ ಆರೋಪಗಳನ್ನು ಸಂಸ್ಥೆಯು ಸಂಪೂರ್ಣವಾಗಿ ಅಲ್ಲಗಳೆದಿದೆ. ಹೈದರಾಬಾದ್‌ನಲ್ಲಿ ನೆಲೆಸಿರುವ ವ್ಯಕ್ತಿ ತೆಲಂಗಾಣದ ಕಂಪನಿಗಳ ರಿಜಿಸ್ಟ್ರಾರ್ ಅಥವಾ ಹೈದರಾಬಾದ್‌ನ ರಾಷ್ಟ್ರೀಯ ಕಂಪನಿಗಳ ನ್ಯಾಯಾಧೀಕರಣ ಅಥವಾ ತೆಲಂಗಾಣ ಪೊಲೀಸರನ್ನು ಸಂಪರ್ಕಿಸುವ ಬದಲು ಆಂಧ್ರಪ್ರದೇಶದ ಸಿಐಡಿಯನ್ನು ಸಂಪರ್ಕಿಸಿದ್ದೇಕೆ ಎಂಬ ಮೂಲಭೂತ ಪ್ರಶ್ನೆಗಳನ್ನು ಸಂಸ್ಥೆ ಎತ್ತಿದೆ.
ಯೂರಿ ರೆಡ್ಡಿ ಅವರು ಮಾರ್ಗದರ್ಶಿ ಚಿಟ್ ಫಂಡ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಮಾಜಿ ಹೂಡಿಕೆದಾರರಾಗಿದ್ದ ಗಾದಿ ರೆಡ್ಡಿ ಜಗನ್ನಾಥ ರೆಡ್ಡಿ ಎಂಬವರ ಪುತ್ರ. ಇವರು ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ. ಇದು ರಾಮೋಜಿ ಗ್ರೂಪ್ ಅನ್ನು ಟಾರ್ಗೆಟ್ ಮಾಡುವ ಆಂಧ್ರ ಪ್ರದೇಶ ಸರ್ಕಾರದ ಮತ್ತೊಂದು ಪ್ರಯತ್ನ ಎಂದು ಸಂಸ್ಥೆ ಹೇಳಿದೆ.
ಮಾರ್ಗದರ್ಶಿ ಚಿಟ್ ಫಂಡ್‌ಗಳಲ್ಲಿನ ತಮ್ಮ ಕುಟುಂಬದ ಷೇರುಗಳನ್ನು ರಾಮೋಜಿ ಗ್ರೂಪ್ ಅಧ್ಯಕ್ಷ ರಾಮೋಜಿ ರಾವ್ ಅವರು 'ಬಲವಂತ' ಮತ್ತು 'ಬೆದರಿಕೆ'ಯ ಮೂಲಕ ಬದಲಾಯಿಸಿದ್ದಾರೆ ಎಂದು ಯೂರಿ ರೆಡ್ಡಿ ಮಂಗಳವಾರ ಆರೋಪಿಸಿದ್ದರು. ಈ ಆರೋಪಗಳನ್ನು ರಾಮೋಜಿ ಗ್ರೂಪ್ ಸ್ಪಷ್ಟವಾಗಿ ಸೂಕ್ತ ಕಾರಣಗಳೊಂದಿಗೆ ತಳ್ಳಿಹಾಕಿದೆ. ''ಆಂಧ್ರದ ಸಿಐಡಿ ಇನ್ನೊಂದು ದೊಡ್ಡ ಕಥೆ ಹೆಣೆದಿದೆ. ಜಿ.ಯೂರಿ ರೆಡ್ಡಿ ಅವರನ್ನು ಕೈಗೊಂಬೆಯಾಗಿ ಬಳಸಿಕೊಂಡು ದೂರು ದಾಖಲಿಸಿದೆ'' ಎಂದು ಸಂಸ್ಥೆ ತಿಳಿಸಿದೆ.
"ನಾನು ಉತ್ತರ ಪ್ರದೇಶದ ನೋಯ್ಡಾದಲ್ಲಿ ನೆಲೆಸಿದ್ದೆ. ಪ್ರಸ್ತುತ ಹೈದರಾಬಾದ್‌ನಲ್ಲಿ ನೆಲೆಸಿದ್ದೇನೆ ಎಂದು ದೂರುದಾರರು ಹೇಳಿದ್ದಾರೆ. ಈ ಹೇಳಿಕೆಯಂತೆ ಮಾರ್ಗದರ್ಶಿ ಚಿಟ್ ಫಂಡ್ ಅಧ್ಯಕ್ಷ ರಾಮೋಜಿ ರಾವ್ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಅವರ ಮಾನಹಾನಿ ಮಾಡುವ ಏಕೈಕ ದುರುದ್ದೇಶದಿಂದ ಹೊಸ ಎಫ್‌ಐಆರ್ ದಾಖಲಿಸಲು ಆಂಧ್ರ ಸರ್ಕಾರ ದೂರುದಾರರನ್ನು ಬಳಸಿಕೊಂಡಿದೆ. ಆಂಧ್ರದ ಸಿಐಡಿಯೊಂದಿಗೆ ಸೇರಿಕೊಂಡು ಕಂಪನಿಯ ಘನತೆಗೆ ಕಳಂಕ ತರಲು ದೊಡ್ಡ ಪಿತೂರಿ ರೂಪಿಸಲಾಗಿದೆ'' ಎಂದು ರಾಮೋಜಿ ಗ್ರೂಪ್ ಗುರುವಾರ ಹೇಳಿಕೆ ಬಿಡುಗಡೆ ಮಾಡಿದೆ.
''ಈ ದೂರು ಸಂಪೂರ್ಣ ಸುಳ್ಳು ಮತ್ತು ಕಾಲ್ಪನಿಕ ಆರೋಪಗಳಿಂದ ಕೂಡಿದೆ. ಸತ್ಯಕ್ಕೆ ಸಂಪೂರ್ಣವಾಗಿ ವಿರುದ್ಧ. ಈ ವರ್ಷದ ಅಕ್ಟೋಬರ್ 10ರಂದು ದಾಖಲಿಸಲಾದ ಎಫ್‌ಐಆರ್ ಮತ್ತು 2017ರಲ್ಲಿ ದೂರುದಾರರ ಮೂಲ ದೂರಿನ ನಡುವೆ ಹಲವಾರು ವ್ಯತಿರಿಕ್ತಗಳಿವೆ. ಇದಕ್ಕೆ ಸಂಸ್ಥೆಯು ಪ್ರತ್ಯುತ್ತರ ನೀಡಿದೆ. ಇದಕ್ಕೆ ಅವರು ಅಜಾಗರೂಕತೆಯಿಂದ ವರ್ಗಾವಣೆ ಫಾರ್ಮ್‌ಗೆ (5H-4) ಸಹಿ ಮಾಡಿದ್ದಾರೆ ಎಂದು ಹೇಳಿದ್ದರು. ಆಂಧ್ರದ ಸಿಐಡಿಯೊಂದಿಗೆ ಕೈಜೋಡಿಸಿ ದೂರುದಾರರು ಹೊಸ ಕಥೆ ಹೆಣೆದಿದ್ದಾರೆ'' ಎಂದು ರಾಮೋಜಿ ಗ್ರೂಪ್ ಹೇಳಿದೆ.
ಷೇರು ವರ್ಗಕ್ಕೆ ಒಪ್ಪಿಗೆ ನೀಡಿದ್ದ ದೂರುದಾರ:''ಷೇರುಗಳ ವರ್ಗಾವಣೆಯ ಆರೋಪ ಮಾಡಿರುವ ಯೂರಿ ರೆಡ್ಡಿ ಮತ್ತು ಅವರ ಸಹೋದರರು ಸ್ವಯಂಪ್ರೇರಿತವಾಗಿ ಒಪ್ಪಿಕೊಂಡಿದ್ದಾರೆ. ಕಂಪನಿಯ ಷರತ್ತುಗಳಿಗೆ ಅವರು ಸಹಿ ಹಾಕಿದ್ದಾರೆ. ಅನುಕೂಲ ಮಾಡಿಕೊಟ್ಟಿದ್ದಕ್ಕೆ ರಾಮೋಜಿ ರಾವ್ ಅವರಿಗೆ ಕೃತಜ್ಞತೆಗಳನ್ನೂ ಸಲ್ಲಿಸಿದ್ದಾರೆ. ಈ ಬಗ್ಗೆ ಅವರು ಇಮೇಲ್ ಮಾಡಿದ್ದಾರೆ. ಯೂರಿ ರೆಡ್ಡಿ ಈಗ ಮಾಡಿರುವ ಆರೋಪ ಮತ್ತು ಅಂದು ಕಂಪನಿಯ ಜತೆಗೆ ನಡೆದುಕೊಂಡಿದ್ದು ಭಿನ್ನವಾಗಿದೆ. ಷೇರುಗಳು ಮತ್ತು ಅವುಗಳ ಮೌಲ್ಯದ ಬಗ್ಗೆ ತಿಳಿದಿದ್ದೇ ಕಂಪನಿಯ ಪತ್ರಗಳಿಗೆ ಸಹಿ ಮಾಡಿದ್ದಾರೆ'' ಎಂದು ರಾಮೋಜಿ ಗ್ರೂಪ್ ಹೇಳಿದೆ.