ಮುಂಬೈ :ಮೂರು ದಿನಗಳ ಹಿಂದೆ ಥಾಣೆಯಲ್ಲಿ ನಡೆದ ಸಾರ್ವಜನಿಕ ಯೋಗ ಕಾರ್ಯಕ್ರಮದಲ್ಲಿ ರಾಮ್‌ದೇವ್ ಬಾಬಾ ಮಹಿಳೆಯರ ಉಡುಪುಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಂಕರ್, ನಿಂದನೆಯ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡುವಂತೆ ಬಾಬಾ ರಾಮದೇವ್ಗೆ ನೋಟಿಸ್ ಕಳುಹಿಸಿ ಕ್ಷಮಾಪಣೆ ಪತ್ರವನ್ನು ಸಲ್ಲಿಸಲು ಗಡುವು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಬಾಬಾ ರಾಮದೇವ್ ರಾಜ್ಯ ಮಹಿಳಾ ಆಯೋಗಕ್ಕೆ ಕ್ಷಮಾಪಣೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ನಾನು ಯಾವುದೇ ಅಪರಾಧ ಮಾಡಿಲ್ಲ. ಆದರೆ, ಸಾರ್ವಜನಿಕ ಸಮಾರಂಭದಲ್ಲಿ ಮಹಿಳೆಯರ ಉಡುಪುಗಳ ಬಗ್ಗೆ ಒಂದು ಗಂಟೆ ಭಾಷಣ ಮಾಡುವಾಗ ನಾನು ಮಾತೃತ್ವವನ್ನು ವೈಭವೀಕರಿಸಿದ್ದೇನೆ. ಆ ಸಮಯದಲ್ಲಿ ಮಹಿಳೆಯರ ಸಾದಾ ಬಟ್ಟೆಯನ್ನು ಉಲ್ಲೇಖಿಸುವ ಉದ್ದೇಶವಿತ್ತು. ಆದರೆ ಮಹಿಳೆಯರ ಅವಹೇಳನ ಮಾಡುವ ಉದ್ದೇಶದಿಂದ ಆ ಮಾತು ಹೇಳಿರಲಿಲ್ಲ. ಆದಾಗ್ಯೂ ನನ್ನ ಹೇಳಿಕೆಯು ಮಹಿಳಾ ವರ್ಗವನ್ನು ಅವಮಾನಿಸಿದ್ದರೆ ಕ್ಷಮಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.