ಪಾಟ್ನಾ(ಬಿಹಾರ) : ರಾಜಕೀಯ ಗದ್ದಲದ ನಡುವೆ ರಾಜಧಾನಿ ಪಾಟ್ನಾದ ದಾನಪುರ ಕ್ಷೇತ್ರದ ಆರ್‌ಜೆಡಿ ಶಾಸಕ ರಿತ್ಲಾಲ್ ಯಾದವ್ ಅವರು, 16ನೇ ಶತಮಾನದ ಭಕ್ತಿ ಕವಿ ತುಳಸಿದಾಸ್ ಅವರು ತಮ್ಮ ಪ್ರಸಿದ್ಧ ಕೃತಿ ರಾಮಚರಿತಮಾನಸವನ್ನು ಮಸೀದಿಯೊಳಗೆ ಕುಳಿತು ಬರೆದಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಆರ್‌ಜೆಡಿ ಮಿತ್ರ ಪಕ್ಷ ಜೆಡಿಯು ಶಾಸಕರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ.
ಬಿಜೆಪಿಯ ಹಿಂದುತ್ವದ ವಿರುದ್ಧ ವಾಗ್ದಾಳಿ ನಡೆಸಿದ ರಿತ್ಲಾಲ್, ರಾಮಚರಿತಮಾನಸವನ್ನು ಮಸೀದಿಯಲ್ಲಿ ಕುಳಿತು ಬರೆಯಲಾಗಿತ್ತು. ಆಗ ಹಿಂದುತ್ವ ಅಪಾಯದಲ್ಲಿ ಇರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ನೀವು ಹಿಂದುತ್ವದ ಭಾಗವಾಗಬೇಕು ಎಂದು ಬಯಸಿದ್ದರೆ, ಪಕ್ಷದಿಂದ ಎಲ್ಲ ಮುಸ್ಲಿಮರನ್ನೂ ಹೊರ ಹಾಕಿ ಎಂದು ಸವಾಲು ಹಾಕಿದ್ದಾರೆ. ತ್ರಿವಳಿ ತಲಾಕ್ ನಿಷೇಧಿಸಿದ್ದನ್ನೂ ಅವರು ಪ್ರಶ್ನಿಸಿದ್ದಾರೆ. ಭಾರತದಲ್ಲಿ 11 ವರ್ಷದ ಮುಸ್ಲಿಂ ಹುಡುಗಿ ಭಗವತ್ ಕಥಾ ಪಠಿಸಿ ಪ್ರಶಸ್ತಿ ಪಡೆದಾಗ ಜನರು ಏನನ್ನೂ ಹೇಳುವುದಿಲ್ಲ. ಬಿಜೆಪಿಯವರು ತಮ್ಮ ಪಕ್ಷದಲ್ಲಿರುವ ಮುಸ್ಲಿಂ ನಾಯಕರನ್ನು ಪಕ್ಷದಿಂದ ಹೊರಹಾಕಬೇಕು ಎಂದು ರಿತ್ಲಾಲ್ ಯಾದವ್ ವಾಗ್ದಾಳಿ ನಡೆಸಿದ್ದಾರೆ.
ನೀವು ಸಮುದಾಯಗಳ ನಡುವೆ ಹಗೆತನ ಸೃಷ್ಟಿಸಲು ಪ್ರಯತ್ನಿಸುತ್ತಿದ್ದೀರಿ. ಇದು ಎಷ್ಟು ಕಾಲದವರೆಗೂ ನಡೆಯಲಿದೆ. ಈ ಹಿಂದೆ ರಾಮ ಮಂದಿರದ ಬಗ್ಗೆ ಚರ್ಚೆ ನಡೆಯುತ್ತಿತ್ತು. ರಾಮಚರಿತ ಮಾನಸವನ್ನು ಬರೆದಿರುವುದು ಮಸೀದಿಯಲ್ಲಿ. ಹಿಂದಿನ ಕಾಲದಲ್ಲಿ ನಮ್ಮ ಹಿಂದುತ್ವಕ್ಕೆ ಯಾವ ಬೆದರಿಕೆಯೂ ಇರಲಿಲ್ಲ. ಅಷ್ಟು ಸುದೀರ್ಘ ಅವಧಿಗೆ ಮೊಘಲರು ಆಡಳಿತ ನಡೆಸಿದ್ದರೂ ಕೂಡ ಹಿಂದುತ್ವ ಅಪಾಯದಲ್ಲಿ ಇರಲಿಲ್ಲ ಎಂದರು.