ಲಕ್ನೋ (ಉತ್ತರ ಪ್ರದೇಶ):ಚೀನಾದ ಹ್ಯಾಂಗ್‌ಝೌನಲ್ಲಿ 2023ರ 19ನೇ ಏಷ್ಯನ್ ಗೇಮ್ಸ್ ನಡೆಯುತ್ತಿದ್ದು, ಇದೇ ಅಕ್ಟೋಬರ್ 8ಕ್ಕೆ ಮುಕ್ತಾಯವಾಗಲಿದೆ. ಮೊನ್ನೆ ಇಲ್ಲಿ ನಡೆದ ರೇಸ್ವಾಕ್ ಮಿಶ್ರಿತ ಸ್ಪರ್ಧೆಯಲ್ಲಿ ಉತ್ತರ ಪ್ರದೇಶದ ರಾಮ್ ಬಾಬು 5:51:14 ಸೆಕೆಂಡುಗಳಲ್ಲಿ 35 ಕಿ.ಮೀಅನ್ನು ಪೂರ್ಣಗೊಳಿಸಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.
ರಾಮ್ ಬಾಬು ಅವರ ಹಿನ್ನೆಲೆ ನೋಡುವುದಾದರೆ.. ಅವರದ್ದು ತೀರಾ ಬಡತನದ ಕುಟುಂಬ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗದಡಿಯಲ್ಲಿ ತಂದೆ-ತಾಯಿ ಕೆಲಸ ಮಾಡುತ್ತಿದ್ದು, ಹಳ್ಳಿಯಲ್ಲಿರುವ ಮಣ್ಣಿನ ಮನೆಯಲ್ಲಿ ತಮ್ಮ ಜೀವನ ಕಳೆಯುತ್ತಿದ್ದಾರೆ. ಕೂಲಿ ಕೆಲಸ ಮಾಡಿ ಕುಟುಂಬವನ್ನು ಸಾಕುತ್ತಿರುವ ಈ ದಂಪತಿಗೆ ತಮ್ಮ ಮಗನ ಸಾಧನೆ ತುಂಬಾ ಹೆಮ್ಮೆ ತಂದಿದೆ.
ರಾಮ್ ಬಾಬು ಸೋನಭದ್ರಾ ಜಿಲ್ಲಾ ಕೇಂದ್ರದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಬಹುರಾ ಗ್ರಾಮದಾತ. ಕಷ್ಟದ ಜೀವನವನ್ನೇ ಕಂಡ ರಾಮ್ನ ಸಾಧನೆ ಇಡೀ ಜಿಲ್ಲೆ, ದೇಶವೇ ಹೆಮ್ಮೆ ಪಡುವಂತೆ ಮಾಡಿದೆ. ಸೋನಭದ್ರನ ಈ ಪುತ್ರನ ಈ ಯಶಸ್ಸಿಗೆ ಜಿಲ್ಲೆಯ ಜನರು ಅಭಿನಂದಿಸಿದ್ದಾರೆ. ರಾಮ್ ಬಾಬು ತಾಯಿ ಮೀನಾದೇವಿ ಮಾತನಾಡಿ, ಮಗ ರಾಮ್ ಬಾಬು ಸ್ವತಃ ಆತನೇ ಚೀನಾದಿಂದ ಕರೆ ಮಾಡಿ ತನ್ನ ಗೆಲುವಿನ ಬಗ್ಗೆ ತಿಳಿಸಿದನು. ಸುದ್ದಿ ಕೇಳಿ ತುಂಬಾ ಸಂತಸಪಟ್ಟೆವು.
ನನ್ನ ಮಗನಿಗೆ ನವೋದಯ ವಿದ್ಯಾಲಯ ಸೋನಭದ್ರಾದಲ್ಲಿ ಶಿಕ್ಷಣ ನೀಡಿರುವುದಾಗಿ ತಿಳಿಸಿದ್ದಾರೆ. ಶಿಕ್ಷಣದ ಬಳಿಕ ಮಗ ಹೊರಗೆ ಹೋಗಿದ್ದನು. ಅಲ್ಲದೆ ನಮಗೆ ಮನೆ ಕಟ್ಟಲು ಜಮೀನು ಇಲ್ಲ. ಸರ್ಕಾರ ಜಮೀನು ನೀಡಿದ್ದರು ಹಲವಾರು ಅಡೆತಡೆಗಳಿಂದಾಗಿ ಇಂದಿಗೂ ಮನೆ ಕಟ್ಟಲು ಸಾಧ್ಯವಾಗಿಲ್ಲ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಇದಕ್ಕೂ ಮುನ್ನ ಚಿನ್ನದ ಪದಕ: ಕೂಲಿ ರೈತರ ಮಗ ಈ ಹಿಂದೆ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ವೇಗದ ನಡಿಗೆಯಲ್ಲಿ ಭಾಗವಹಿಸಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದರು. ಈ ಸ್ಪರ್ಧೆಯಲ್ಲಿ 35 ಕಿ.ಮೀ ದೂರವನ್ನು ಕೇವಲ 2 ಗಂಟೆ 36 ನಿಮಿಷ 34 ಸೆಕೆಂಡುಗಳಲ್ಲಿ ಕ್ರಮಿಸಿ ಚಿನ್ನದ ಪದಕ ಬಾಚಿಕೊಂಡಿದ್ದರು. ಹಾಗೆ 15 ಫೆಬ್ರವರಿ 2023 ರಂದು ರಾಂಚಿಯಲ್ಲಿ ನಡೆದ ರಾಷ್ಟ್ರೀಯ ವಾಕಿಂಗ್ ಚಾಂಪಿಯನ್‌ಶಿಪ್‌ನಲ್ಲಿ 2 ಗಂಟೆ 31 ನಿಮಿಷ 36 ಸೆಕೆಂಡುಗಳಲ್ಲಿ ಜಯಿಸಿದ್ದರು. ಇದಾದ ಬಳಿಕ ಮಾರ್ಚ್ 25ರಂದು ಸ್ಲೋವಾಕಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿಯೂ ರಾಮ್ ಬಾಬು ಭಾಗವಹಿಸಿದ್ದರು. ಇನ್ನು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ರಾಮ್ ಬಾಬು ಕನಸಾಗಿದೆ ಎನ್ನುತ್ತಾರೆ ತಾಯಿ ಮೀನಾದೇವಿ.
ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ರೇಸ್ವಾಕ್ ಮಿಶ್ರಿತ ಸ್ಪರ್ಧೆಯಲ್ಲಿ ರಾಮ್ ಬಾಬು ಮತ್ತು ಮಂಜು ರಾಣಿ 35 ಕಿ.ಮೀ. ರೇಸ್ವಾಕ್ ಮಿಶ್ರಿತ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ಗೆದ್ದುಕೊಟ್ಟರು. ಈ ಸ್ಪರ್ಧೆಯಲ್ಲಿ ಗುರಿ ಮುಟ್ಟಲು ಅವರಿಬ್ಬರ ಜೋಡಿ 5 ಗಂಟೆ 51 ನಿಮಿಷಗಳು ಮತ್ತು 14 ಸೆಕೆಂಡುಗಳನ್ನು ತೆಗೆದುಕೊಂಡರು.
ಇದನ್ನೂ ಓದಿ:ಏಷ್ಯನ್ ಗೇಮ್ಸ್ 2023: ಮಹಿಳಾ ಆರ್ಚರಿ, ಸ್ಕ್ವಾಷ್ ಮಿಶ್ರ ಡಬಲ್ಸ್ನಲ್ಲಿ ಭಾರತದ ಮುಡಿಗೇರಿದ ಸ್ವರ್ಣ ಪದಕ...