ರಾಯಪುರ: ಟೂಲ್ಕಿಟ್ ಪ್ರಕರಣದಲ್ಲಿ ವಿಚಾರಣೆ ನಡೆಉತ್ತಿರುವ ರಾಯಪುರ ಪೊಲೀಸರು ಇಂದು ಛತ್ತೀಸಗಢ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ರಮಣ ಸಿಂಗ್ ಅವರನ್ನು ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ರಮಣ ಸಿಂಗ್ ಹಾಗೂ ಪಕ್ಷದ ಮತ್ತೋರ್ವ ಹಿರಿಯ ನಾಯಕ ಸಂಬಿತ ಪಾತ್ರಾ ಇಬ್ಬರೂ ನಕಲಿ ಟೂಲ್ ಕಿಟ್ ಪ್ರಚಾರ ಮಾಡಿದ್ದಾರೆಂದು ಆರೋಪಿಸಿ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಮೇ 19 ರಂದು ದಾಖಲಾಗಿದ್ದ ಈ ದೂರಿಗೆ ಸಂಬಂಧಿಸಿದಂತೆ ರಾಯಪುರದ ಸಿವಿಲ್ ಲೇನ್ಸ್ ಠಾಣೆ ಪೊಲೀಸರು ರಮಣ ಸಿಂಗ್ ಅವರಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಗೆ ಸೋಮವಾರ ಮಧ್ಯಾಹ್ನ 12.30ಕ್ಕೆ ತಮ್ಮ ಮನೆಯಲ್ಲಿ ಹಾಜರಿರುವಂತೆ ಸೂಚಿಸಿದ್ದರು.
ಟೂಲ್ ಕಿಟ್ ಪ್ರಕರಣ ವಿಚಾರಣೆಗೆ ಮಾಜಿ ಸಿಎಂ ರಮಣ ಸಿಂಗ್ ಮನೆಗೆ ವಿಚಾರಣೆಗೆ ಆಗಮಿಸುತ್ತಿರುವ ಪೊಲೀಸರು "ನಗರ ಪೊಲೀಸ್ ಸುಪರಿಂಟೆಂಡೆಂಟ್ ನಾಸರ್ ಸಿದ್ದಿಕಿ ಅವರ ನೇತೃತ್ವದ ವಿಚಾರಣಾ ತಂಡವು ಇಂದು ಸಿಂಗ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಕಳೆದ ವಾರ ಅವರಿಗೆ ಕಳುಹಿಸಲಾದ ನೋಟಿಸಿನಲ್ಲಿದ್ದ ಪ್ರಶ್ನೆಗಳಿಗೆ ಅವರು ಲಿಖಿತ ರೂಪದಲ್ಲಿ ಉತ್ತರಗಳನ್ನು ನೀಡಿದ್ದಾರೆ. ತಾವು ಸೋಷಿಯಲ್ ಮೀಡಿಯಾ ಹಾಗೂ ಇತರ ಮಾಧ್ಯಮಗಳಲ್ಲಿ ಹಂಚಿಕೊಂಡ ಮಾಹಿತಿಗಳೆಲ್ಲವೂ ಈಗಾಗಲೇ ಸಾರ್ವಜನಿಕವಾಗಿ ವಿವಿಧ ಮಾಧ್ಯಮಗಳಲ್ಲಿ ಲಭ್ಯವಿವೆ ಎಂದು ಸಿಂಗ್ ತಿಳಿಸಿದ್ದಾರೆ." ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರ್ಯಾಲಿಯೊಂದರಲ್ಲಿ ರಮಣ ಸಿಂಗ್ ವಿಚಾರಣೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಮಣ ಸಿಂಗ್, ಎಫ್ಐಆರ್ ದಾಖಲಿಸಿದ್ದು, ಕಾಂಗ್ರೆಸ್ ಪಕ್ಷದ ಕುತಂತ್ರವಾಗಿದೆ. ಛತ್ತೀಸಗಢದಲ್ಲಿ ಕಾನೂನಿನ ಸರ್ಕಾರವಿಲ್ಲ. ಅಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವಿದೆ ಎಂದು ಆರೋಪಿಸಿದರು.
"ನನಗೆ ಪೊಲೀಸರು ಜಾರಿ ಮಾಡಿದ್ದ ನೋಟಿಸ್ ನನಗೆ ತಲುಪುವ ಮೊದಲೇ ಅದನ್ನು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿತ್ತು, ಪೊಲೀಸರ ಬಳಿಯೇ ಇರಬೇಕಾಗಿದ್ದ ದಾಖಲೆ ಕಾಂಗ್ರೆಸ್ ಬಳಿ ಇತ್ತು. ಪೊಲೀಸರಿಗೆ ಎಲ್ಲಿಂದ ಆಜ್ಞೆಗಳು ಬರುತ್ತಿವೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ." ಎಂದು ರಮಣ ಸಿಂಗ್ ಹೇಳಿದರು.