ಭಾರತವು 1947 ರಲ್ಲಿ ಸ್ವಾತಂತ್ರ್ಯ ಪಡೆದಿರಬಹುದು, ಆದರೆ, ಶತಮಾನದ ಹಿಂದೆಯೇ ಸ್ವಾತಂತ್ರ್ಯದ ಕಿಚ್ಚು ಹೊತ್ತಿತ್ತು. 1857 ರಿಂದಲೇ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗಿತ್ತು. ರಾಮಗಢದ ರಾಣಿ ಅವಂತಿ ಬಾಯಿ ಸಹ ಪರಕೀಯರ ನಿದ್ದೆಕೆಡಿಸಿದ್ದ ಕೆಚ್ಚೆದೆಯ ವೀರರಾಣಿ.
ಸ್ವಾತಂತ್ರ್ಯ ಹೋರಾಟದ ವಿಚಾರದಲ್ಲಿ ರಾಣಿ ಅವಂತಿ ಬಾಯಿ ಅವರ ಹೆಸರನ್ನು ಮಾಂಡ್ಲಾ ಜಿಲ್ಲೆಯಲ್ಲಿ ಇಂದಿಗೂ ಗೌರವ ಮತ್ತು ಹೆಮ್ಮೆಯಿಂದ ತೆಗೆದುಕೊಳ್ಳಲಾಗುತ್ತದೆ.
ಸ್ವಾತಂತ್ರ್ಯದ ಕಹಳೆ ಊದಿದ ರಾಣಿ ಅವಂತಿಬಾಯಿ ಅವಂತಿಬಾಯಿ 1831ರ ಆಗಸ್ಟ್ 16 ರಂದು ಸಿಯೋನಿ ಜಿಲ್ಲೆಯ ಮಂಕೇಹಾಡಿ ಗ್ರಾಮದ ಭೂಮಾಲೀಕ ರಾವ್ ಜುಝಾರ್ ಸಿಂಗ್ ಪುತ್ರಿಯಾಗಿ ಜನಿಸಿದರು. ಪೋಷಕರು ಆಂಟೋ ಬಾಯಿ ಎಂದು ಹೆಸರಿಟ್ಟಿದ್ದರು. ಅವಂತಿ ಬಾಯಿ ಖಡ್ಗ ಕರಕುಶಲತೆ, ಬಿಲ್ಲುಗಾರಿಕೆ, ಯುದ್ಧ ತಂತ್ರ, ರಾಜತಾಂತ್ರಿಕತೆ ಮತ್ತು ರಾಜ್ಯಶಾಸ್ತ್ರವನ್ನು ಚೆನ್ನಾಗಿ ಅರಿತಿದ್ದರು. 1848 ರಲ್ಲಿ ರಾಮಗಢದ ರಾಜಮನೆತನಕ್ಕೆ ಸೊಸೆಯಾಗಿ ಹೋದಾಗ ಅಲ್ಲಿ ಅವಂತಿಬಾಯಿ ಎಂದು ಹೆಸರು ಬದಲಿಸಲಾಯಿತು.
1851 ರಲ್ಲಿ, ರಾಮಗಢ ರಾಜ್ಯದ ರಾಜನಾಗಿದ್ದ ಅವಂತಿಬಾಯಿಯ ಮಾವ, ಲಕ್ಷ್ಮಣ್ ಸಿಂಗ್ ನಿಧನರಾದರು. ಬಳಿಕ ರಾಜಕುಮಾರ ವಿಕ್ರಮಾದಿತ್ಯ ಸಿಂಗ್ ರಾಮಗಢದ ಸಿಂಹಾಸನವೇರಿದ. ಆದರೆ ಕೆಲವು ವರ್ಷಗಳ ನಂತರ, ವಿಕ್ರಮಾದಿತ್ಯ ಸಿಂಗ್ ಅನಾರೋಗ್ಯ ಪೀಡಿತನಾಗಿ ಅಸುನೀಗಿದ.
ಅವನ ಇಬ್ಬರು ಮಕ್ಕಳಾದ ಅಮನ್ ಸಿಂಗ್ ಮತ್ತು ಶೇರ್ ಸಿಂಗ್ ಇನ್ನೂ ಚಿಕ್ಕವರಾಗಿದ್ದರಿಂದ, ರಾಣಿ ಅವಂತಿ ಸಾಮ್ರಾಜ್ಯದ ಆಳ್ವಿಕೆಯನ್ನು ತನ್ನ ಕೈಗೆ ತೆಗೆದುಕೊಂಡಳು. ಆಗ ಬ್ರಿಟಿಷರು ಅವಂತಿಬಾಯಿಯನ್ನು ರಾಣಿ ಎಂದು ಗುರುತಿಸಲು ನಿರಾಕರಿಸಿದರು ಮತ್ತು ಕುಖ್ಯಾತ "ಲ್ಯಾಪ್ಸ್ ಡಾಕ್ಟ್ರಿನ್" ಅನ್ನು ರಾಮಗಢದಲ್ಲಿ ಜಾರಿಗೆ ತಂದರು. ತಮ್ಮದೇ ಆಡಳಿತಾಧಿಕಾರಿಯನ್ನು ನೇಮಿಸಿದರು.
ಪರಂಗಿಗಳ ಈ ನಿರ್ಧಾರದ ಮೇಲೆ ಕೋಪಗೊಂಡ ಅವಂತಿಬಾಯಿ ನಿರ್ವಾಹಕರನ್ನು ಹೊರಹಾಕಿದರು. ಬ್ರಿಟಿಷರ ವಿರುದ್ಧ ಯುದ್ಧ ಘೋಷಿಸಿದರು. ಬ್ರಿಟಿಷರ ವಿರುದ್ಧದ ಮೊದಲ ಯುದ್ಧವು ಖೇರಿ ಗ್ರಾಮದಲ್ಲಿ ನಡೆಯಿತು. ಯುದ್ಧ ತಂತ್ರಗಳ ಮೇಲೆ ತನ್ನ ಪಾಂಡಿತ್ಯದಿಂದ, ಅವಂತಿಬಾಯಿ ಬ್ರಿಟಿಷ್ ಸೈನ್ಯವನ್ನು ಮಣಿಸಿದಳು.
ಆದರೆ ಬ್ರಿಟಿಷರು ಶೀಘ್ರದಲ್ಲೇ ಮಂಡಲದ ಉಪ ಆಯುಕ್ತ ವಾಡಿಂಗ್ಟನ್‌ರ ಅಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರುಸಂಘಟಿಸಿದರು. ರಾಮಗಢ ಕೋಟೆಯ ಮೇಲೆ ದಾಳಿ ಮಾಡಿದರು. ರಾಣಿ ಮತ್ತು ಅವಳ ಸೈನಿಕರು ವೀರಾವೇಶದಿಂದ ಹೋರಾಡಿದರು. ಆದರೆ, ಸೈನ್ಯ ಕ್ಷೀಣಿಸಿತ್ತು, ಶರಣಾಗುವುದನ್ನು ಬಿಟ್ಟು ರಾಣಿಯ ಮುಂದೆ ಯಾವುದೇ ಆಯ್ಕೆ ಇರಲಿಲ್ಲ.
ಬ್ರಿಟಿಷರು ರಾಣಿಗೆ ಸಂದೇಶ ಕಳುಹಿಸಿದರು. ಶರಣಾಗುವಂತೆ ಕೇಳಿದರು. ಆದರೆ ರಾಣಿ ಅದನ್ನು ತಿರಸ್ಕರಿಸಿದರು. ಪರಕೀಯರ ಕೈಯಾಳಾಗಲು ಇಚ್ಛಿಸದೆ ತನ್ನ ಖಡ್ಗದಿಂದ ತಾನೇ ಚುಚ್ಚಿಕೊಂಡು 20 ಮಾರ್ಚ್ 1858 ರಂದು ಪ್ರಾಣತ್ಯಾಗ ಮಾಡಿದ ವೀರ ರಾಣಿ ಅವಂತಿಬಾಯಿ. ನಂತರ ರಾಮಗಢ ರಾಜ್ಯವು ಬ್ರಿಟಿಷರ ಪಾಲಾಯಿತು. ಆದರೆ ಸ್ವಾತಂತ್ರ್ಯಕ್ಕಾಗಿ ಅವಂತಿಬಾಯಿ ಹೊತ್ತಿಸಿದ ಕಿಚ್ಚು ಮಾತ್ರ ಎಂದಿಗೂ ಆರಲಿಲ್ಲ. ಇತಿಹಾಸದ ಪುಟಗಳಲ್ಲಿ ಅವಂತಿಬಾಯಿಯ ಧೈರ್ಯ, ಸಾಹಸ ಎಂದೆಂದಿಗೂ ಅಜರಾಮರ.