ಅಯೋಧ್ಯೆ(ಉತ್ತರ ಪ್ರದೇಶ): ಅಯೋಧ್ಯೆಯ ರಾಮ ಜನ್ಮಭೂಮಿ ಪ್ರಕರಣದಲ್ಲಿ ಬಾಬರಿ ಮಸೀದಿ ಪರವಾಗಿ ಕಾನೂನು ಹೋರಾಟ ನಡೆಸಿದ್ದ ಇಕ್ಬಾಲ್ ಅನ್ಸಾರಿ ಅವರಿಗೆ ಜನವರಿ 22ರಂದು ನಡೆಯಲಿರುವ ದೇವರ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪದಾಧಿಕಾರಿಗಳು ಅಧಿಕೃತ ಆಮಂತ್ರಣ ಕೊಟ್ಟರು.
ಬಾಬರಿ ಮಸೀದಿ ಪ್ರಕರಣದಲ್ಲಿ ಇಕ್ಬಾಲ್ ಅನ್ಸಾರಿ ತಂದೆ ಹಶ್ಮಿ ಅನ್ಸಾರಿ ಫಿರ್ಯಾದಿಯಾಗಿದ್ದರು. ಬಳಿಕ ಇಕ್ಬಾಲ್ ಸಹ ಪ್ರಕರಣವನ್ನು ಪ್ರತಿಪಾದಿಸುತ್ತಿದ್ದರು. ಸುಮಾರು ಏಳು ದಶಕಗಳ ಕಾಲ ಕೆಳ ಹಂತದ ನ್ಯಾಯಾಲಯದಿಂದ ಸುಪ್ರೀಂ ಕೋರ್ಟ್ವರೆಗೂ ಅನ್ಸಾರಿ ಅರ್ಜಿದಾರರಾಗಿದ್ದರು. ಅಂತಿಮವಾಗಿ 2019ರಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯವು ರಾಮ ಮಂದಿರ ಪರವಾಗಿ ತೀರ್ಪು ಪ್ರಕಟಿಸಿತ್ತು. ಆಗ ಈ ಆದೇಶವನ್ನು ಸ್ವಾಗತಿಸಿದ್ದ ಅನ್ಸಾರಿ ನಂತರ ರಾಮ ಮಂದಿರ ನಿರ್ಮಾಣವನ್ನು ಬೆಂಬಲಿಸುತ್ತಲೇ ಬಂದಿದ್ದಾರೆ.
ಆಹ್ವಾನ ಸಿಕ್ಕಿರುವುದು ನನ್ನ ಅದೃಷ್ಟ-ಇಕ್ಬಾಲ್ ಅನ್ಸಾರಿ:ಶುಕ್ರವಾರ ಮಧ್ಯಾಹ್ನ ಇಕ್ಬಾಲ್ ಅನ್ಸಾರಿ ಅವರ ಮನೆಗೆ ತೆರಳಿದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪದಾಧಿಕಾರಿಗಳು, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದರು. ಈ ಆಮಂತ್ರಣ ಸ್ವೀಕರಿಸಿದ ಅವರು, ''ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಮಹೋತ್ಸವಕ್ಕೆ ಖಂಡಿತವಾಗಿಯೂ ಭಾಗವಹಿಸುವೆ. ಈ ಆಹ್ವಾನ ದೊರೆತಿರುವುದು ನನ್ನ ಅದೃಷ್ಟ'' ಎಂದು ತಮ್ಮ ಸಂತಸ ವ್ಯಕ್ತಪಡಿಸಿದರು.