ಅಯೋಧ್ಯಾ: ಕೋಟ್ಯಂತರ ಭಾರತೀಯರ ಕನಸು ಅಯೋಧ್ಯಾ ರಾಮಮಂದಿರ ನಿರ್ಮಾಣ ಕಾರ್ಯ ಈಗಾಗಲೇ ಭರದಿಂದ ಸಾಗಿದೆ. ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ 2023ರ ಡಿಸೆಂಬರ್ ವೇಳೆಗೆ ಭಕ್ತರ ಪ್ರವೇಶಕ್ಕೆ ಓಪನ್ ಆಗಲಿದೆ ಎಂದು ತಿಳಿದು ಬಂದಿದೆ.
ಕಳೆದ ವರ್ಷ ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯಾ ದೇವಾಲಯ ನಿರ್ಮಾಣದ ಭೂಮಿ ಪೂಜೆ ನೇರವೇರಿಸಿದ್ದರು. ಇದಾದ ಬಳಿಕ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ನಾಳೆಗೆ ಒಂದು ವರ್ಷ ಮುಕ್ತಾಯಗೊಳ್ಳಲಿದೆ. ಅದ್ಭುತ ದೇವಾಲಯ ನಿರ್ಮಿಸಲು ನಿರ್ಧರಿಸಿರುವ ಕಾರಣ ದೇಶಾದ್ಯಂತ ಹಣ ಕೂಡ ಸಂಗ್ರಹ ಮಾಡಲಾಗಿದೆ. 3,000 ಕೋಟಿ ರೂ.ಗೂ ಅಧಿಕ ಹಣ ರಾಮನ ಮಂದಿರ ಕಟ್ಟಲು ದೇಣಿಗೆ ರೂಪದಲ್ಲಿ ಹರಿದು ಬಂದಿದೆ.
ರಾಮನ ಮಂದಿರ 161 ಅಡಿ ಎತ್ತರ ಇರಲಿದ್ದು, ನಾಗರ ಶೈಲಿಯ ವಾಸ್ತುಶಿಲ್ಪ ರೀತಿಯಲ್ಲಿ ದೇವಾಲಯ ನಿರ್ಮಾಣಗೊಳ್ಳಲಿದೆ. 66 ಎಕರೆ ಜಮೀನಿನಲ್ಲಿ ಬೃಹತ ದೇಗುಲ ನಿರ್ಮಾಣಗೊಳ್ಳುತ್ತಿದೆ. ನಿರ್ಮಾಣಕ್ಕಾಗಿ ಪಿಂಕ್ ಕಲ್ಲು ಬಳಕೆ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಈಗಾಗಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದುಕೊಂಡಿದ್ದಾರೆ.
2024ರ ಲೋಕಸಭೆ ಗಮನದಲ್ಲಿಟ್ಟುಕೊಂಡು ಯೋಜನೆ
2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅದನ್ನ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಜನರನ್ನ ಸೆಳೆಯಲು ಈ ಯೋಜನೆ ರೂಪಿಸಿದೆ ಎನ್ನಲಾಗುತ್ತಿದೆ. 2023ರ ವೇಳೆಗೆ ದೇವಾಲಯದ ಗರ್ಭ ಗೃಹ ಸ್ಥಾಪನೆ ಪೂರ್ಣಗೊಳ್ಳಲಿರುವ ಕಾರಣ ತಾತ್ಕಾಲಿಕವಾಗಿ ಭಕ್ತರ ದರ್ಶನಕ್ಕೆ ಅನುಮತಿ ನೀಡಲಿದೆ ಎಂದು ತಿಳಿದು ಬಂದಿದೆ.