ಅಯೋಧ್ಯಾ(ಉತ್ತರ ಪ್ರದೇಶ):2024ರ ಲೋಕಸಭಾ ಚುನಾವಣೆಗೂ ಮುಂಚಿತವಾಗಿ ಭಕ್ತರ ಪ್ರವೇಶಕ್ಕೆ ಅಯೋಧ್ಯಾ ರಾಮಮಂದಿರ ದೇಗುಲ ಓಪನ್ ಆಗಲಿದ್ದು, ಈಗಾಗಲೇ ಗರ್ಭಗುಡಿ ಕೆಲಸ ಸಹ ಭರದಿಂದ ಶುರುವಾಗಿದೆ. ಇದೇ ವಿಚಾರವಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಸದಸ್ಯರೂ ಆಗಿರುವ ಪೇಜಾವರ ಮಠದ ಪೀಠಾಧೀಶ ವಿಶ್ವ ಪ್ರಸನ್ನ ತೀರ್ಥರು ಮಾತನಾಡಿದ್ದಾರೆ.
2024ರ ಜನವರಿ ತಿಂಗಳಲ್ಲಿ ಅಯೋಧ್ಯೆ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 2023ರ ಅಂತ್ಯದ ವೇಳೆಗೆ ದೇವಾಲಯದ ಗರ್ಭಗುಡಿಯೊಳಗೆ ನಾಲ್ಕು ಮಂಟಪ ಸಿದ್ಧವಾಗಲಿವೆ. 2024ರ ಜನವರಿ ತಿಂಗಳಲ್ಲಿ ಭಗವಾನ್ ಶ್ರೀ ರಾಮಲಲ್ಲಾ ಮಂದಿರದೊಳಗೆ ಆಸೀನರಾಗಲಿದ್ದಾರೆಂದು ತಿಳಿಸಿದ್ದಾರೆ.
ದೇವಸ್ಥಾನದ ನೆಲ ಅಂತಸ್ತಿನ ನಿರ್ಮಾಣದ ಕಾಮಗಾರಿ 18 ತಿಂಗಳಲ್ಲಿ ಪೂರ್ಣಗೊಲ್ಳಬೇಕಿದೆ. ಏಪ್ರಿಲ್ ತಿಂಗಳಲ್ಲಿ ಮಂದಿರದ ವಿವಿಧ ದೇಗುಲಗಳಲ್ಲಿ ದೇವರ ಪ್ರತಿಮೆ ಕೂರಿಸಲು ಟ್ರಸ್ಟ್ ನಿರ್ಧರಿಸಿದೆ. ಆದರೆ, ಇದಕ್ಕಾಗಿ ದೇಶಾದ್ಯಂತ ಇರುವ ಸಂತರ ಅಭಿಪ್ರಾಯ ಸಂಗ್ರಹಿಸಲಾಗುವುದು. ರಾಮಲಲ್ಲಾ ಪ್ರತಿಮೆ 3ರಿಂದ 5 ಅಡಿ ಎತ್ತರ ಇರಲಿದ್ದು, ರಾಮಲಲ್ಲಾ ವಿಗ್ರಹ ಕಪ್ಪು ಬಣ್ಣದಲ್ಲಿ ಇರಲಿದೆ ಎಂದು ಸ್ವಾಮಿ ವಿಶ್ವ ಪ್ರಸನ್ನ ತೀರ್ಥರು ತಿಳಿಸಿದ್ದಾರೆ.
ಇದನ್ನೂ ಓದಿ:ಹಾರ್ದಿಕ್ ಪಾಂಡ್ಯ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದು ರೋಚಕ.. 4 ತಿಂಗಳ ಕಾಲ ಬೆಳಗ್ಗೆ 5 ಗಂಟೆಗೆ ಎದ್ದು ತರಬೇತಿ
ಶಾಲಿಗ್ರಾಮ್ ಬಣ್ಣ ಅಥವಾ ಬಿಳಿ ಅಮೃತಶಿಲೆಯ ಕಲ್ಲುಗಳನ್ನ ಗರ್ಭಗುಡಿಯಲ್ಲಿ ಬಳಕೆ ಮಾಡಲು ನಿರ್ಧರಿಸಲಾಗಿದ್ದು, ಶ್ರೀರಾಮನ ಮೂರ್ತಿ ಬಾಲ ಸ್ವರೂಪದಲ್ಲಿ ಇರಲಿದೆ ಎಂದು ತಿಳಿಸಿದರು. ಅಯೋಧ್ಯಾ ರಾಮಮಂದಿರ ಗರ್ಭಗುಡಿಗೆ ಕಳೆದ ವಾರ ಯೋಗಿ ಆದಿತ್ಯನಾಥ್ ಅಡಿಗಲ್ಲು ಹಾಕಿದ್ದು, ಕೆಲಸ ಈಗಾಗಲೇ ಬರದಿಂದ ಸಾಗಿದೆ.