ಅಯೋಧ್ಯೆ (ಉತ್ತರಪ್ರದೇಶ):ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯುವ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಆಹ್ವಾನಿತ ಭಕ್ತರಿಗೆ ಶ್ರೀರಾಮಜನ್ಮ ಭೂಮಿಯ ಪವಿತ್ರ ಮಣ್ಣು, ಸರಯೂ ನದಿಯ ತೀರ್ಥ, ದೇಸಿ ತುಪ್ಪದಲ್ಲಿ ತಯಾರಿಸಲಾದ ಲಡ್ಡು ಪ್ರಸಾದವಾಗಿ ನೀಡಲಾಗುತ್ತದೆ.
ಅಡಿಪಾಯ ಅಗೆಯುವ ಸಂದರ್ಭದಲ್ಲಿ ಹೊರತೆಗೆಯಲಾದ ರಾಮ ಜನ್ಮಭೂಮಿಯ ಮಣ್ಣನ್ನು ಪಾಕೆಟ್ಗಳಲ್ಲಿ ಪ್ಯಾಕ್ ಮಾಡಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಅತಿಥಿಗಳಿಗೆ ನೀಡಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಶುಕ್ರವಾರ ತಿಳಿಸಿದೆ. ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಯೋಧ್ಯೆಯ ರಾಮಮಂದಿರದ 15 ಮೀಟರ್ ಉದ್ದದ ಆಕೃತಿ, ಪವಿತ್ರ ಮಣ್ಣು ಸೇರಿ ವಿವಿಧ ಪ್ರಸಾದವನ್ನು ಉಡುಗೊರೆಯಾಗಿ ನೀಡಲಾಗುವುದು ಟ್ರಸ್ಟ್‌ನ ಸದಸ್ಯರೊಬ್ಬರು ತಿಳಿಸಿದ್ದಾರೆ.
ಆಹ್ವಾನಿತರಿಗೆ ಲಡ್ಡು, ತೀರ್ಥ ಪ್ರಸಾದ:ದಿವ್ಯ ದೇಗುಲದ ಉದ್ಘಾಟನಾ ಕಾರ್ಯಕ್ರಮಕ್ಕೆ ಬರುವ ಆಹ್ವಾನಿತರು ಮತ್ತು ಅತಿಥಿಗಳು ಸೇರಿದಂತೆ 11,000 ಕ್ಕೂ ಹೆಚ್ಚು ಭಕ್ತರಿಗೆ ಸ್ಮರಣೀಯ ಉಡುಗೊರೆಗಳನ್ನು ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಪವಿತ್ರ ಮಣ್ಣಿನೊಂದಿಗೆ ದೇಸಿ ತುಪ್ಪದಲ್ಲಿ ವಿಶೇಷವಾಗಿ ತಯಾರಿಸಲಾದ 100 ಗ್ರಾಂ ತೂಕದ ಮೋತಿಚೂರ್ ಲಡ್ಡುಗಳನ್ನು ಪ್ರಸಾದವಾಗಿ ನೀಡಲಾಗುವುದು. ಆಹ್ವಾನಿತರಿಗೆ ನೀಡುವ ಎರಡು ಉಡುಗೊರೆಗಳಲ್ಲಿ ಒಂದರಲ್ಲಿ ಲಡ್ಡು, ಪವಿತ್ರ ತುಳಸಿ ಎಲೆ ಇದ್ದರೆ, ಇನ್ನೊಂದರಲ್ಲಿ ಪವಿತ್ರ ಮಣ್ಣು ಇರುತ್ತದೆ ಎಂದು ಟ್ರಸ್ಟ್ ಹೇಳಿದೆ.