ಸಿವಾನ್ (ಬಿಹಾರ): ಸಿವಾನ್ ಜಿಲ್ಲೆಯಲ್ಲಿರುವ ದೇವಸ್ಥಾನವೊಂದು ಹೆಚ್ಚು ಐತಿಹಾಸಿಕ ಪ್ರಸಿದ್ಧಿ ಪಡೆದಿದೆ. ಇಲ್ಲಿ ದೇವತೆಗಳ ಬದಲಿಗೆ ಸಹೋದರ ಸಹೋದರಿಯರನ್ನು ಪೂಜಿಸಲಾಗುತ್ತದೆ. ದೇವಾಲಯದ ಆವರಣದಲ್ಲಿ ಆಲದ ಮರಗಳು ಒಂದಕ್ಕೊಂದು ಸಂಪರ್ಕ ಹೊಂದಿವೆ. ಮರಗಳು ಮತ್ತು ದೇವಾಲಯವು ಸಹೋದರ ಸಹೋದರಿಯರನ್ನು ಸಂಕೇತಿಸುತ್ತದೆ ಎಂದು ನಂಬಲಾಗಿದೆ.
ಹೌದು, ಸಹೋದರ- ಸಹೋದರಿಯ ನಡುವಿನ ಪ್ರೀತಿಯನ್ನು ಬಿಂಬಿಸುವ ರಕ್ಷಾ ಬಂಧನದ ದಿನದಂದು ಈ ದೇವಾಲಯದಲ್ಲಿ ಅಕ್ಕ - ತಂಗಿಯರು ತಮ್ಮ ಅಣ್ಣ-ತಮ್ಮಂದಿರ ದೀರ್ಘಾಯುಷ್ಯಕ್ಕಾಗಿ ಪೂಜೆ ಸಲ್ಲಿಸಿ ಪ್ರಾರ್ಥಿಸುತ್ತಾರೆ. ನಂತರ ಸಹೋದರನು ತನ್ನ ಸಹೋದರಿಯನ್ನು ರಕ್ಷಿಸುವ ಪ್ರತಿಜ್ಞೆ ಮಾಡುತ್ತಾನೆ. ವಿಶೇಷ ಎಂದರೆ, ದೇವಾಲಯದಲ್ಲಿ ಯಾವುದೇ ಪ್ರತಿಮೆ ಇಲ್ಲ. ಆದರೆ, ಮಣ್ಣಿನ ದೇಹವನ್ನು ಮಾಡಲಾಗಿದೆ, ಇದನ್ನು ಜನರು ಸಹೋದರ ಮತ್ತು ಸಹೋದರಿಯ ಸಂಕೇತವೆಂದು ಕರೆಯುತ್ತಾರೆ.
ಸಿವಾನ್ ಜಿಲ್ಲೆಯ ದರೋಂಡಾ ಬ್ಲಾಕ್‌ನಲ್ಲಿರುವ 'ಭೈಯ ಬಹಿನಿ ದೇವಸ್ಥಾನ' ಸಹೋದರ - ಸಹೋದರಿಯ ಪ್ರೀತಿಯ ಸಂಕೇತ. ಭೈಯ ಬಹಿನಿ ಎಂಬ ಗ್ರಾಮಕ್ಕೆ ದೇವಸ್ಥಾನದ ಹೆಸರನ್ನೇ ಇಡಲಾಗಿದೆ. ಈ ದೇವಸ್ಥಾನದಲ್ಲಿ ಅಣ್ಣ-ತಂಗಿರಿಬ್ಬರ ಪ್ರೀತಿಯ ಕುರಿತಾದ ಶತಮಾನಗಳ ಇತಿಹಾಸವಿದೆ. ಜಾನಪದದ ಪ್ರಕಾರ, ಇಬ್ಬರು ಒಡಹುಟ್ಟಿದವರವನ್ನು ರಕ್ಷಿಸಲು ದೇವರು ಇಲ್ಲಿ ಸ್ವತಃ ಕಾಣಿಸಿಕೊಂಡ ಎಂಬ ಪ್ರತೀತಿ ಇದೆ. ಅಂದಿನಿಂದ ಪ್ರತಿ ವರ್ಷ ರಕ್ಷಾ ಬಂಧನದಂದು ಸಹೋದರ ಮತ್ತು ಸಹೋದರಿಯರನ್ನು ಪೂಜಿಸಲು ಗ್ರಾಮದಲ್ಲಿ ಜನಸಮೂಹ ಸೇರುತ್ತದೆ.
500 ವರ್ಷಗಳ ಹಳೆಯ ಸಂಪ್ರದಾಯ : ಗ್ರಾಮಸ್ಥರು ನೀಡಿದ ಮಾಹಿತಿ ಪ್ರಕಾರ, ಅಣ್ಣ- ತಂಗಿ ಜೋಡಿಯನ್ನು ರಕ್ಷಿಸಲು ದೇವರೇ ಭೂಮಿಗೆ ಬಂದನು ಎಂಬ ನಂಬಿಕೆ ಸುಮಾರು 500 ವರ್ಷಗಳಷ್ಟು ಹಳೆಯದು. ದೇವಸ್ಥಾನ ನಿರ್ಮಾಣವಾಗಿರುವ ಸ್ಥಳದಲ್ಲಿ ಸಹೋದರ ಸಹೋದರಿಯರು ಸಮಾಧಿಯಾಗಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. ದೇವಾಲಯದಲ್ಲಿ ಅನೇಕ ಆಲದ ಮರಗಳು ಇವೆ, ಅವುಗಳು ಪರಸ್ಪರ ಸಂಪರ್ಕ ಹೊಂದಿದ್ದು, ಇಬ್ಬರ ನಡುವಿನ ಪ್ರೀತಿಯನ್ನು ಸಂಕೇತಿಸುತ್ತವೆ.
ಏನಿದು ಇತಿಹಾಸ? : ಸಹೋದರನೊಬ್ಬ ತನ್ನ ಸಹೋದರಿಯನ್ನು ಕೈಮೂರ್‌ನಲ್ಲಿರುವ ಅತ್ತೆಯ ಮನೆಗೆ ಕರೆದುಕೊಂಡು ಹೋಗುತ್ತಿದ್ದನಂತೆ. ಅಂದು ಬ್ರಿಟಿಷರ ಆಳ್ವಿಕೆ ನಡೆಯುತ್ತಿತ್ತು. ಸಹೋದರ ಮತ್ತು ಸಹೋದರಿ ಹೋಗುತ್ತಿರುವುದನ್ನು ಮನಗಂಡ ಡಕಾಯಿತರು ಇಬ್ಬರನ್ನೂ ಸುತ್ತುವರೆದು ದೌರ್ಜನ್ಯ ಎಸಗಲು ಪ್ರಾರಂಭಿಸಿದ್ದರಂತೆ. ದರೋಡೆಕೋರರ ವಿರುದ್ಧ ಹೋರಾಡಲು ಸಹೋದರ ಪ್ರಯತ್ನಿಸಿದನಾದರೂ ಏಕಾಂಗಿಯಾಗಿದ್ದರಿಂದ ಸಾಧ್ಯವಾಗಲಿಲ್ಲ.
ಇದಾದ ನಂತರ ಇಬ್ಬರೂ ತಮ್ಮ ಗೌರವ ಮತ್ತು ಪ್ರಾಣ ಉಳಿಸಿಕೊಳ್ಳಲು ಮುಂದಾಗಿದ್ದು, ಕುದುರೆಗಳ ಮೇಲೆ ಬಂದ ದರೋಡೆಕೋರರಿಂದ ತಪ್ಪಿಸಿಕೊಳ್ಳಲು ದೇವರ ಮೊರೆ ಹೋದರಂತೆ. 'ಓ ಭೂಮಾತೆ, ನನ್ನನ್ನು ನಿನ್ನೊಳಗೆ ಕರೆದುಕೊಂಡು ಹೋಗು, ನನ್ನನ್ನು ರಕ್ಷಿಸು' ಎಂದು ಪ್ರಾರ್ಥನೆ ಕೈಗೊಂಡಾಗ ಸಹೋದರ-ಸಹೋದರಿಯ ಕರೆಯನ್ನು ಕೇಳಿ ದೇವರು ಕಾಣಿಸಿಕೊಂಡನಂತೆ. ಈ ವೇಳೆ ಭೂಮಿಯು ಇದ್ದಕ್ಕಿದ್ದಂತೆ ಸ್ಫೋಟಗೊಂಡಿತು. ಡಕಾಯಿತರ ಹಿಡಿತದಿಂದ ಈ ಜೋಡಿಯು ಬಿಡುಗಡೆಯಾಗಿ ಭೂಮಿಯೊಳಗೆ ಸಮಾಧಿಯಾದರು. ಬಳಿಕ, ಡಕಾಯಿತರು ಭೂಮಿ ಸಿಡಿಯುವುದನ್ನು ಕಂಡು ಹೆದರಿ ಓಡಿ ಹೋದರು. ಇದಾದ ನಂತರ ಗ್ರಾಮದ ಜನರು ಇಲ್ಲಿ ದೇವಸ್ಥಾನ ನಿರ್ಮಿಸಿದರು ಎಂದು ಸ್ಥಳೀಯರಾದ ಉಮಾಪತಿ ದೇವಿ ಸ್ಥಳದ ಐತಿಹ್ಯವನ್ನು ಹೇಳಿದ್ದಾರೆ.
ಇದನ್ನೂ ಓದಿ :ಗಡಿಯಲ್ಲಿ ಯೋಧರ ಕೈಗೆ ರಾಖಿ ಕಟ್ಟಿ ಸಂಭ್ರಮಿಸಿದ ಶಾಲಾ ವಿದ್ಯಾರ್ಥಿನಿಯರು