ನವದೆಹಲಿ:ಮೂರು ಕೃಷಿ ಕಾನೂನುಗಳಿಗೆ ತಡೆಯಾಜ್ಞೆ ನೀಡಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ರೈತರು ಸ್ವಾಗತಿಸಿದ್ದಾರೆ. ಆದರೆ, ಈ ಮೂರು ಕಾನೂನುಗಳನ್ನು ರದ್ದುಗೊಳಿಸುವವರೆಗೂ ಪ್ರತಿಭಟನಾ ಸ್ಥಳದಿಂದ ನಿರ್ಗಮಿಸಲ್ಲ ಎಂದೂ ಹೇಳಿದ್ದಾರೆ.
ಸುಪ್ರೀಂ ತೀರ್ಪಿನ ಬಳಿಕ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ನ ಮುಖಂಡ ರಾಕೇಶ್ ಟಿಕೈಟ್, ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ. ಸರ್ಕಾರವು ಮೂರು ಕಾನೂನುಗಳನ್ನು ರದ್ದುಪಡಿಸಬೇಕು ಮತ್ತು ಕನಿಷ್ಠ ಬೆಂಬಲ ಬೆಲೆ ಖಾತರಿ ಪಡಿಸುವ ಕಾನೂನನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಸುಪ್ರೀಂ ತೀರ್ಪಿಗೆ ಸ್ವಾಗತ.. ಹೋರಾಟ ಮುಂದುವರಿಯುತ್ತೆ ಎಂದ ರಾಕೇಶ್ ಟಿಕೈಟ್ ಸುಪ್ರೀಂ ಕೋರ್ಟ್ ರಚಿಸುವ ಸಮಿತಿಯಲ್ಲಿ ಇರಬೇಕೋ, ಬೇಡ್ವೋ ಎಂಬುದರ ಕುರಿತಾಗಿ ನಾವು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಜತೆಗೆ ಜನವರಿ 15 ರಂದು ಕೇಂದ್ರ ಸರ್ಕಾರದೊಂದಿಗೆ ನಿಗದಿಯಾಗಿರುವ ಸಭೆಗೆ ಹೋಗುತ್ತೇವೆ ಎಂದರು.
ಜನವರಿ 26 ರ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಪರೇಡ್ ನಡೆಯುತ್ತದೆ. ಅದರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ರೈತ ಮುಖಂಡ ಜಸ್ಪ್ರೀತ್ ಸಿಂಗ್ ಮಾತನಾಡಿ, ಈ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ನಾವು ಒತ್ತಾಯಿಸುತ್ತಿದ್ದೇವೆ. ಕಳೆದ ಎರಡು ತಿಂಗಳಿನಿಂದ ನಾವು ಪ್ರತಿಭಟನೆ ನಡೆಸುತ್ತಿದ್ದು, ಈವರೆಗೆ ಕನಿಷ್ಠ 70 ರೈತರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು.