ಗಾಜಿಯಾಬಾದ್ (ಉತ್ತರ ಪ್ರದೇಶ): ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆ ಅನಿರ್ದಿಷ್ಟ ಅವಧಿಯವರೆಗೆ ಮುಂದುವರಿಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ವಕ್ತಾರ ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.
ಹೊಸದಾಗಿ ಜಾರಿಗೆ ಬಂದಿರುವ ಮೂರು ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸದ ಹೊರತು ನಮ್ಮ ರೈತರ ಚಳವಳಿ ಅಂತ್ಯಗೊಳ್ಳುವುದಿಲ್ಲ. ಬಹುಶಃ ಅಕ್ಟೋಬರ್ವರೆಗೆ ಪ್ರತಿಭಟನೆ ಮುಂದುವರಿಯಬಹುದು ಎಂದು ಈ ಹಿಂದೆ ಟಿಕಾಯತ್ ಹೇಳಿದ್ದರು. ಆದರೆ, ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ಧರಣಿ ಅನಿರ್ದಿಷ್ಟ ಅವಧಿಯವರೆಗೆ ನಡೆಯುತ್ತದೆ ಎಂದು ಹೇಳಿದ್ದಾರೆ.