ನವದೆಹಲಿ: ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಬೆಂಬಲಿಸಿರುವ ರೈತ ಮುಖಂಡರು, ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಕೇಂದ್ರಕ್ಕೆ ಏಳು ದಿನಗಳ ಗಡುವನ್ನು ಕೊಟ್ಟದ್ದಾರೆ. ಅಲ್ಲದೆ, ಸಿಂಗ್ ಅವರನ್ನು ಬಂಧಿಸದಿದ್ದಲ್ಲಿ ಜೂನ್ 9 ರಂದು ದೇಶಾದ್ಯಂತ ರೈತರು ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಮಾತನಾಡಿ, ಸರ್ಕಾರವು ಕುಸ್ತಿಪಟುಗಳ ಕುಂದು ಕೊರತೆಗಳನ್ನು ಪರಿಹರಿಸಿ ಸಿಂಗ್ ಅವರನ್ನು ಬಂಧಿಸಬೇಕು. ಇಲ್ಲದಿದ್ದರೆ ಜೂನ್ 9ರಂದು ದೆಹಲಿಯ ಜಂತರ್‌ಮಂತರ್‌ಗೆ ಕುಸ್ತಿಪಟುಗಳೊಂದಿಗೆ ರೈತ ಮುಖಂಡರು ತೆರಳಲಿದ್ದು, ದೇಶಾದ್ಯಂತ ಪಂಚಾಯಿತಿ ನಡೆಸಲಾಗುವುದು ಎಂದು ಟಿಕಾಯತ್ ತಿಳಿಸಿದರು. "ಸರ್ಕಾರವು ಸಿಂಗ್ ಅವರನ್ನು ಬಂಧಿಸಬೇಕು ಅಥವಾ ದೊಡ್ಡ ಪ್ರತಿಭಟನೆಯನ್ನು ಎದುರಿಸಲು ಸಿದ್ಧರಾಗಿರಬೇಕು. ಯಾವುದನ್ನು ಬೇಕಾದರೂ ಸರ್ಕಾರ ಆಯ್ಕೆ ಮಾಡಿಕೊಳ್ಳಲಿ" ಎಂದು ಟಿಕಾಯತ್ ಹೇಳಿದ್ದಾರೆ.
ಇದಕ್ಕೂ ಮುನ್ನ ರೈತ ಮುಖಂಡರು ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್‌ನಲ್ಲಿ ಖಾಪ್ ಮಹಾ ಪಂಚಾಯತ್‌ಗಳನ್ನು ನಡೆಸಿ ಕುಸ್ತಿಪಟುಗಳಿಗೆ ಬೆಂಬಲವನ್ನು ವ್ಯಕ್ತಪಡಿಸಲು ಮತ್ತು ಈ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.
ಅಲ್ಲದೆ, ಸಂಯುಕ್ತ ಕಿಸಾನ್ ಮೋರ್ಚಾದ ಬ್ಯಾನರ್ ಅಡಿಯಲ್ಲಿ ರೈತರು ರಾಷ್ಟ್ರಪತಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಿದರು ಮತ್ತು ಹರಿಯಾಣ, ಪಂಜಾಬ್‌ನ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ಗಳ ಕಚೇರಿಗಳಲ್ಲಿ ಪ್ರತಿಭಟನೆ ನಡೆಸಿದರು. ಕುಸ್ತಿಪಟುಗಳ ಬೇಡಿಕೆಯನ್ನು ಈಡೇರಿಸದಿದ್ದರೆ ದೆಹಲಿಯ ಗಡಿಯನ್ನು ನಿರ್ಬಂಧಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದರು.