ಭರತಪುರ, ರಾಜಸ್ಥಾನ :ರೈತರು ಕಿಂಗ್ ಮೇಕರ್ ಆಗಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅವಶ್ಯಕತೆ ಇಲ್ಲ. ಚುನಾವಣೆ ಸ್ಪರ್ಧೆಯಿಂದ ದೂರವಿರುವುದು ಉತ್ತಮ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಅಭಿಪ್ರಾಯಪಟ್ಟಿದ್ದಾರೆ.
ರಾಜಸ್ಥಾನದ ಭರತಪುರದಲ್ಲಿ ಮಹಾರಾಜ ಸೂರಜ್ಮಲ್ ಅವರ ಸ್ಮರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಕೇಶ್ ಟಿಕಾಯತ್, ರೈತರ ಹೋರಾಟದಿಂದ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ. ಯುದ್ದವೆಂದರೆ ಶಸ್ತ್ರಗಳಿಂದ ಹೋರಾಡುವುದಲ್ಲ, ಸತ್ಯಾಗ್ರಹದಿಂದಲೂ ಗೆಲ್ಲಬಹುದು. ನನಗೆ ಭರತ್ಪುರದ ಮಹಾರಾಜ ಸೂರಜ್ಮಲ್ ಸ್ಫೂರ್ತಿ ಎಂದರು.
ರೈತರು ಬೇರೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವ ಅಗತ್ಯವಿಲ್ಲ. ಏಕೆಂದರೆ, ಸ್ಪರ್ಧಿಸದೆ ಅವರ ಎಲ್ಲಾ ಕೆಲಸಗಳು ನಡೆಯುತ್ತವೆ. ರೈತನೇ ಕಿಂಗ್ ಮೇಕರ್. ಸೋಲು-ಗೆಲುವಿನ ಪ್ರಶ್ನೆಯೂ ಇಲ್ಲ. ವರ್ಷವಿಡೀ ರೈತ ಚಳವಳಿಯನ್ನು ಜೀವಂತವಾಗಿಟ್ಟಿದ್ದ ರೈತರೇ ಪ್ರಮುಖ ನಾಯಕರಾಗಿದ್ದಾರೆ. ದೇಶದಲ್ಲಿ ಚಳವಳಿ, ಚಳವಳಿಗಾರರು ಬಲಿಷ್ಠರಾಗಬೇಕು. ಇಬ್ಬರೂ ಬಲಿಷ್ಠವಾಗಿದ್ದರೆ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ ಎಂದು ರಾಕೇಶ್ ಟಿಕಾಯತ್ ಅಭಿಪ್ರಾಯಪಟ್ಟಿದ್ದಾರೆ.