ಗಾಜಿಯಾಬಾದ್(ಉತ್ತರ ಪ್ರದೇಶ): ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಹರಿಯುವ ನೀರಿನಲ್ಲಿ ಬೆಂಬಲಿಗರೊಡನೆ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ದೆಹಲಿ ಮತ್ತು ಉತ್ತರ ಪ್ರದೇಶ ಗಡಿಯಾದ ಗಾಜೀಪುರದಲ್ಲಿ ರಾಕೇಶ್ ಟಿಕಾಯತ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಭಾರಿ ಪ್ರಮಾಣದ ಮಳೆಯಿಂದಾಗಿ ಪ್ರತಿಭಟನೆಗೆ ಹಾಕಲಾಗಿದ್ದ ಟೆಂಟ್ಗಳು ಹಾನಿಗೊಳಗಾಗಿವೆ. ಪ್ರತಿಭಟನೆ ಸ್ಥಳದಲ್ಲಿ ನೀರು ತುಂಬಿದ ಹಿನ್ನೆಲೆಯಲ್ಲಿ ರಾಕೇಶ್ ಟಿಕಾಯತ್ ಅದೇ ನೀರಿನಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ರಾಕೇಶ್ ಟಿಕಾಯತ್ ನೀರು ತುಂಬಿದ ರಸ್ತೆಯಲ್ಲಿ ಮೇಲೆ ಕುಳಿತು ಪ್ರತಿಭಟನೆ ಮುಂದುವರಿಸಿದ್ದಾರೆ. ಇಲ್ಲಿಂದ ದೆಹಲಿಯ ಕಡೆಗೆ ಹೋಗುವ ಚರಂಡಿಗಳನ್ನು ಸ್ವಚ್ಛಗೊಳಿಸಬೇಕೆಂದು ಈಗಾಗಲೇ ಒತ್ತಾಯಿಸಿದ್ದೇವೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಈ ನಮ್ಮ ಮನವಿಗೆ ಕಿವಿಗೊಡಲಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ನ ಮಾಧ್ಯಮ ಉಸ್ತುವಾರಿ ಧರ್ಮೇಂದ್ರ ಮಲಿಕ್ ಹೇಳಿದ್ದಾರೆ.
ಭಾರಿ ಮಳೆಯಿಂದಾಗಿ ಶನಿವಾರದಂದು ಗಡಿ ಪ್ರದೇಶದಲ್ಲಿ ಪ್ರತಿಭಟನಾಕಾರರು ಸ್ಥಾಪಿಸಿದ್ದ ಹಲವು ಡೇರೆಗಳು ಮತ್ತು ಟೆಂಟ್ಗಳಿಗೆ ಹಾನಿಯಾಗಿದೆ. ರೈತರು ಮೂರೂ ಋತುಮಾನಗಳನ್ನು ನೋಡಿದ್ದಾರೆ. ಈಗ ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಮಲಿಕ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಕೊರೊನಾ ವಿರುದ್ಧ ಮತ್ತೊಂದು ಅಸ್ತ್ರ.. ಅಕ್ಟೋಬರ್ ಆರಂಭದಲ್ಲಿ Zydus Cadila ಲಸಿಕೆ ಲಭ್ಯ ಸಾಧ್ಯತೆ