ಮುಂಬೈ:ಷೇರುಪೇಟೆ ಹೂಡಿಕೆದಾರ, ಬಿಲಿಯೇನರ್ ಹಾಗು ಆಕಾಸಾ ವಿಮಾನಯಾನ ಸಂಸ್ಥಾಪಕ ರಾಕೇಶ್ ಜುಂಜುನ್ವಾಲಾ ಮುಂಬೈನಲ್ಲಿ ಇಂದು ನಿಧನ ಹೊಂದಿದರು. ಅವರಿಗೆ 62 ವರ್ಷ ವಯಸ್ಸಾಗಿತ್ತು. ರಾಕೇಶ್ ಜುಂಜುನ್ವಾಲಾ ಅವರ ಆಕಾಸಾ ಏರ್ಲೈನ್ಸ್ ಆಗಸ್ಟ್ 7 ರಂದು ಚಾಲನೆ ಕಂಡಿತ್ತು. ಫೋರ್ಬ್ಸ್ ಪಟ್ಟಿಯ ಪ್ರಕಾರ ಇವರು 2021 ರಲ್ಲಿ ಭಾರತದ 36ನೇ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ 438 ನೇ ಶ್ರೀಮಂತ ವ್ಯಕ್ತಿಯಾಗಿದ್ದರು.
ಜುಂಜುನ್ವಾಲಾ ಅವರು ಅನೇಕ ಕಂಪನಿಗಳು ಮತ್ತು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದರು. ಆಗಸ್ಟ್ 2022 ರ ಹೊತ್ತಿಗೆ ಅವರ ನಿವ್ವಳ ಮೌಲ್ಯವು 5.8 ಬಿಲಿಯನ್ ಡಾಲರ್ ಆಗಿತ್ತು ಎಂದು ವರದಿಗಳು ತಿಳಿಸಿವೆ. ತಮ್ಮ ಸಂಸ್ಥೆಯಾದ ರೇರ್ ಎಂಟರ್‌ಪ್ರೈಸಸ್ ಮೂಲಕ ವಿಶ್ವದ ಹಲವು ಷೇರುಪೇಟೆ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿಯೂ ಹೂಡಿಕೆ ಮಾಡಿದ್ದರು. ಜುಂಜುನ್ವಾಲಾ ಅವರನ್ನು ಭಾರತದ ವಾರೆನ್ ಬಫೆಟ್ ಎಂದೂ ಕರೆಯಲಾಗುತ್ತದೆ.