ನವದೆಹಲಿ:ಅದಾನಿ ಮತ್ತು ರಾಹುಲ್ ಗಾಂಧಿ ಸದಸ್ಯತ್ವ ಅನರ್ಹ ವಿಷಯವಾಗಿ ನಡೆಯುತ್ತಿರುವ ಗದ್ದಲದ ಮಧ್ಯೆಯೇ ರಾಜ್ಯಸಭೆಯಲ್ಲಿ ಯಾವುದೇ ಚರ್ಚೆ ಇಲ್ಲದೇ, ಹಣಕಾಸು ಮಸೂದೆ ಮತ್ತು ಜಮ್ಮು ಕಾಶ್ಮೀರ ಉಪಯೋಜನೆ ಮಸೂದೆಯನ್ನು ಅಂಗೀಕರಿಸಲಾಗಿದೆ. ಇದಕ್ಕೂ ಮೊದಲು 3 ದಿನಗಳ ಹಿಂದಷ್ಟೇ ಲೋಕಸಭೆಯಲ್ಲಿ ಮಸೂದೆ ಮಂಡಿಸಿ ಅನುಮೋದನೆ ಪಡೆಯಲಾಗಿತ್ತು.
ಹಿಂಡನ್‌ಬರ್ಗ್ ವರದಿಯಂತೆ ಅದಾನಿ ಹಗರಣದ ಕುರಿತು ತನಿಖಾ ಸಮಿತಿ ರಚನೆಗೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಭಾರೀ ಗದ್ದಲ ನಡೆಸುತ್ತಿವೆ. ಇದರಿಂದ ಕಲಾಸ ಸತತವಾಗಿ ಮುಂದೂಡುತ್ತಲೇ ಸಾಗಿದೆ. ಹಣಕಾಸು ಮಸೂದೆಯನ್ನು ಸರ್ಕಾರ ಅಂಗೀಕಾರ ಪಡೆಯಬೇಕಿದ್ದ ಕಾರಣ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ರಾಜ್ಯಸಭೆಯಲ್ಲಿ ಮಂಡಿಸಿದರು. ಗದ್ದಲ ಮತ್ತು ಯಾವುದೇ ಚರ್ಚೆ ಇಲ್ಲದೇ, ಮಸೂದೆಯನ್ನು ಸರ್ಕಾರ ಪಾಸು ಮಾಡಿತು.
ಕಳೆದ ವಾರ ಲೋಕಸಭೆಯಲ್ಲಿ ಹಣಕಾಸು ಮಸೂದೆ-2023 ಅನ್ನು 64 ತಿದ್ದುಪಡಿಗಳೊಂದಿಗೆ ಅಂಗೀಕಾರ ಪಡೆಯಲಾಗಿತ್ತು. ಅದಾನಿ-ಹಿಂಡೆನ್‌ಬರ್ಗ್ ಸಮಸ್ಯೆಯ ಕುರಿತು ಜಂಟಿ ಸಂಸದೀಯ ಸಮಿತಿಯ ತನಿಖೆಯ ಬೇಡಿಕೆಯನ್ನು ಮುಂದುವರಿಸಿದ ವಿರೋಧ ಪಕ್ಷದ ಸಂಸದರ ಘೋಷಣೆಗಳ ನಡುವೆಯೇ ಹಲವಾರು ಅಧಿಕೃತ ತಿದ್ದುಪಡಿಗಳೊಂದಿಗೆ ಲೋಕಸಭೆಯು ಹಣಕಾಸು ಮಸೂದೆ 2023 ಅನ್ನು ಪಾಸು ಮಾಡಿತು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಮಸೂದೆಗೆ ತರಲಾಗಿದ್ದ 64 ಅಧಿಕೃತ ತಿದ್ದುಪಡಿಗಳನ್ನು ಮಂಡಿಸಿದರು. ಸದನ ಮುಂದೂಡಿಕೆಯಾಗಿ ಪುನರಾರಂಭವಾದಾಗ ಅಂಗೀಕಾರಕ್ಕಾಗಿ ತೆಗೆದುಕೊಂಡ ತಿದ್ದುಪಡಿಗಳನ್ನು ಪ್ರಸ್ತಾಪ ಮಾಡಿದರು. 44 ನಿಮಿಷಗಳ ಅವಧಿಯಲ್ಲಿ ಎಲ್ಲಾ ತಿದ್ದುಪಡಿಗಳನ್ನು ಮಂಡಿಸಿ, ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.