ನವದೆಹಲಿ:ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ ಮಸೂದೆ -2021 ಬಿಲ್ಗೆ ಬುಧವಾರ ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿದೆ. ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಮಸೂದೆಯ ಪರಿಗಣನೆ ಮತ್ತು ಅಂಗೀಕಾರದ ಸಮಯದಲ್ಲಿ ವಿರೋಧ ಪಕ್ಷದ ಸಂಸದರು ಗದ್ದಲವನ್ನು ಸೃಷ್ಟಿಸಿದರು. ಜುಲೈ 28 ರಂದು ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.
ಮಸೂದೆ ಅಂಗೀಕರಿಸುವಾಗ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ ಅವರು 'ಹವಾಯಿ ಚಪ್ಪಲ್ ಧರಿಸಿದ ಜನರಿಗೆ' ಹವಾಯಿ ಜಹಾಸ್( ವಿಮಾನ)ದಲ್ಲಿ ಪ್ರಯಾಣಿಸಲು ಅವಕಾಶ ನೀಡುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ ಸಿಂಧಿಯಾ, ವಿಮಾನ ಸೌಲಭ್ಯ ಹೊಂದುವ ಕನಸು ಕೂಡ ಕಂಡಿಲ್ಲದ ದರ್ಬಂಗದಂತಹ ಸ್ಥಳಗಳಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.