ನವದೆಹಲಿ: ಮುಂಗಾರು ಅಧಿವೇಶನದ ವೇಳೆಯಲ್ಲಿ 12 ರಾಜ್ಯಸಭಾ ಸಂಸದರ ಅಮಾನತುಗೊಳಿಸಿದ್ದನ್ನು ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಸಮರ್ಥನೆ ಮಾಡಿಕೊಂಡಿದ್ದು, ಅಮಾನತು ಆದೇಶ ಹಿಂಪಡೆಯಬೇಕೆಂಬ ಪ್ರತಿಪಕ್ಷಗಳ ಮನವಿಯನ್ನು ತಿರಸ್ಕರಿಸಿದ್ದಾರೆ.
ಚಳಿಗಾಲದ ಅಧಿವೇಶನದ ಎರಡನೇ ದಿನವಾದ ಇಂದು ಮಾತನಾಡಿದ ವೆಂಕಯ್ಯ ನಾಯ್ಡು, ಕಳೆದ ಮಾನ್ಸೂನ್ ಅಧಿವೇಶನದ ನಡೆದ ಕಹಿ ಘಟನೆ ಇನ್ನೂ ನಮ್ಮಲ್ಲಿ ಹೆಚ್ಚಿನವರನ್ನು ಕಾಡುತ್ತಲೇ ಇದೆ. ಸದನದ ಕೆಲವು ಹಿರಿಯರು ಘಟನೆಯ ವಿರುದ್ಧವಾಗಿ ತಮ್ಮ ಆಕ್ರೋಶ ಹೊರಹಾಕುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ ರಾಜ್ಯಸಭಾ ಅಧ್ಯಕ್ಷರು ಮತ್ತು ಉಪರಾಷ್ಟ್ರಪತಿಯೂ ಆದ ವೆಂಕಯ್ಯ ನಾಯ್ಡು ಅವರಲ್ಲಿ ಸಂಸದರ ಅಮಾನತು ಹಿಂಪಡೆಯುವಂತೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ವೆಂಕಯ್ಯ ನಾಯ್ಡು ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮನವಿಯನ್ನು ನಾನು ಪರಿಗಣಿಸುತ್ತಿಲ್ಲ. ಅಮಾನತು ಹಿಂಪಡೆಯುವುದಿಲ್ಲ, ಎಂದಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷಗಳ ಸದಸ್ಯರು ಸದನದಿಂದ ಹೊರನಡೆದರು.
ಲೋಕಸಭೆ ಮುಂದೂಡಿಕೆ:12 ರಾಜ್ಯಸಭಾ ಸದಸ್ಯರ ಅಮಾನತು ಆದೇಶ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಲೋಕಸಭೆಯಲ್ಲೂ ಗದ್ದಲವೇರ್ಪಟ್ಟಿದ್ದು, ವಿಪಕ್ಷಗಳು ಸದನವನ್ನು ಬಹಿಷ್ಕರಿಸಿ, ಹೊರನಡೆದಿವೆ. ಈ ಕಾರಣದಿಂದಾಗಿ ಮಧ್ಯಾಹ್ 2 ಗಂಟೆಯವರೆಗೆ ಸದನವನ್ನು ಮುಂದೂಡಲಾಗಿದೆ.
ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ:ರಾಜ್ಯಸಭಾ ಸದಸ್ಯರ ಅಮಾನತು ಆದೇಶ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ, ಲೋಕಸಭೆ ಮತ್ತು ರಾಜ್ಯಸಭೆಯಿಂದ ಹೊರನಡೆದ ಸಂಸದರು ಸಂಸತ್ ಭವನದ ಹೊರಗಿರುವ ಗಾಂಧಿ ಭವನದ ಎದುರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.