ನವದೆಹಲಿ:ಬಂಡುಕೋರರೆಂದು ತಪ್ಪಾಗಿ ಭಾವಿಸಿ ನಾಗಾಲ್ಯಾಂಡ್‌ನಲ್ಲಿ 15 ಮಂದಿ ನಾಗರಿಕರನ್ನು ಸೇನೆ ಹತ್ಯೆ ಮಾಡಿದ್ದ ಘಟನೆ ಇಂದು ರಾಜ್ಯಸಭೆ ಕಲಾಪದಲ್ಲಿ ಪ್ರತಿಧ್ವನಿಸಿತು. ಈ ಘಟನೆಯನ್ನು ಖಂಡಿಸಿ ವಿಪಕ್ಷಗಳು ಪ್ರತಿಭಟನೆ ನಡೆಸಿದವು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಈ ಸಂಬಂಧ ಗೃಹ ಸಚಿವರು ಹೇಳಿಕೆ ನೀಡಬೇಕೆಂದು ಒತ್ತಾಯಿಸಿದರು. ಸದನದಲ್ಲಿ ಗದ್ದಲ-ಕೋಲಾಹಲ ಉಂಟಾದ ಹಿನ್ನೆಲೆಯಲ್ಲಿ ಸಭಾಪತಿ ಎಂ.ವೆಂಕಯ್ಯ ನಾಯ್ಡು ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು. ಆ ಬಳಿಕ ಕಲಾಪ ಪುನಾರಂಭಗೊಂಡಾಗಲೂ ವಿಪಕ್ಷಗಳು ಘೋಷಣೆಗಳನ್ನು ಕೂಗಿ ಗದ್ದಲ ಮುಂದುವರಿಸಿದವು. ಪರಿಣಾಮ ಸಭಾಪತಿ ಸ್ಥಾನದಲ್ಲಿದ್ದ ಉಪಸಭಾಪತಿ ಹರಿವಂಶ್ ನಾರಾಯಣ ಸಿಂಗ್ ಅವರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.
ಇನ್ನು ನಾಗಾಲ್ಯಾಂಡ್ ವಿಚಾರವಾಗಿ ಕಲಾಪ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಅಮಿತ್ ಶಾ ಸೇರಿದಂತೆ ಹಿರಿಯ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ, ಪ್ರಕರಣ ಸಂಬಂಧ ಗೃಹ ಸಚಿವರು ಸದನಕ್ಕೆ ಹೇಳಿಕೆ ನೀಡುವ ಸಾಧ್ಯತೆ ಇದೆ.