ಜಮ್ಮು:ರಜೌರಿ ಜಿಲ್ಲೆಯ ಕಲಾಕೋಟೆಯ ಬಾಜಿ ಮಾಲ್ ಪ್ರದೇಶದಲ್ಲಿ ಅಡಗಿ ಕುಳಿತಿದ್ದ ಇಬ್ಬರು ಉಗ್ರರನ್ನು ಭದ್ರತಾ ಪಡೆಯ ಸೈನಿಕರು ಹೊಡೆದುರುಳಿಸಿದ್ದಾರೆ. ಬುಧವಾರ ನಡೆದ ಮೊದಲ ದಿನದ ಕಾರ್ಯಾಚರಣೆಯಲ್ಲಿ ಇಬ್ಬರು ಕ್ಯಾಪ್ಟನ್ಗಳು ಸೇರಿ ನಾಲ್ವರು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಗುರುವಾರ ನಡೆದ ಕಾರ್ಯಾಚರಣೆಯಲ್ಲಿ ಅಡಗಿದ್ದ ಉಗ್ರರನ್ನು ಹುಡುಕಿ ಬೇಟೆಯಾಡಿದ್ದಾರೆ. ಇದೇ ವೇಳೆ ಇನ್ನೊಬ್ಬ ಯೋಧ ಕೂಡ ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿದೆ.
28 ಗಂಟೆಗಳ ಸುದೀರ್ಘ ಕಾರ್ಯಾಚರಣೆಯಲ್ಲಿ 7 ಮಂದಿ ಬಲಿಯಾದಂತಾಗಿದೆ. ಇದರಲ್ಲಿ ಇಬ್ಬರು ಉಗ್ರರಿದ್ದರೆ, ಐವರು ಯೋಧರು ಹುತಾತ್ಮರಾಗಿದ್ದಾರೆ. ಗುಪ್ತಚರ ಮಾಹಿತಿಯ ನಂತರ, ಸೇನೆ ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆಗೆ ಇಳಿದಿದ್ದರು. ಬುಧವಾರ ಬೆಳಗ್ಗೆ ಕಲಾಕೋಟೆಯ ಬಾಜಿ ಮಾಲ್ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿದ್ದರು. ಎರಡೂ ಕಡೆಯಿಂದ ಸತತ ಗುಂಡಿನ ಚಕಮಕಿ ನಡೆದಿತ್ತು. ಇದರಲ್ಲಿ ಓರ್ವ ಸೇನಾ ಮೇಜರ್ ಹಾಗೂ ಇಬ್ಬರು ಯೋಧರು ಗಾಯಗೊಂಡಿದ್ದರು.
ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದ ನಾಲ್ವರು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇಷ್ಟಾದರೂ, ಕಾರ್ಯಾಚರಣೆ ಮುಂದುವರಿಸಿದ ಸೇನೆ, ರಕ್ತಪಿಪಾಸುಗಳ ಅಡಗಿದ್ದ ಜಾಗವನ್ನು ಪತ್ತೆ ಮಾಡಿ ಹೊಡೆದು ಹಾಕಿದೆ. ಇಬ್ಬರೂ ಉಗ್ರರು ನಿಷೇಧಿತ ಸಂಘಟನೆಯಾದ ಲಷ್ಕರ್ ಎ ತೊಯ್ಬಾ ಸಂಘಟನೆಗೆ ಸೇರಿದವರಾಗಿದ್ದಾರೆ.