ನವದೆಹಲಿ: ಇನ್ನೋವೇಶನ್ಸ್ ಫಾರ್ ಡಿಫೆನ್ಸ್ ಎಕ್ಸಲೆನ್ಸ್ (ಐಡೆಕ್ಸ್) ಹಾಗೂ ಡಿಫೆನ್ಸ್ ಇನ್ನೋವೇಶನ್ ಆರ್ಗನೈಸೇಶನ್ (ಡಿಐಓ) ಇವುಗಳಿಗೆ ಮುಂದಿನ ಐದು ವರ್ಷಗಳ ಕಾಲ 498.8 ಕೋಟಿ ರೂ.ಗಳ ಬಜೆಟ್ ಬೆಂಬಲವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನುಮೋದಿಸಿದ್ದಾರೆ.
ಐಡೆಕ್ಸ್-ಡಿಐಒ ದೇಶದ ರಕ್ಷಣಾ ಮತ್ತು ಏರೋಸ್ಪೇಸ್ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಮತ್ತು ದೇಶೀಕರಣದ ಪ್ರಾಥಮಿಕ ಉದ್ದೇಶ ಹೊಂದಿವೆ. ಹೀಗಾಗಿ ಇವುಗಳಿಗೆ ಬಜೆಟ್ ಬೆಂಬಲ ನೀಡುವುದರಿಂದ ಪ್ರಧಾನಿ ನರೇಂದ್ರ ಮೋದಿಯವರ 'ಆತ್ಮನಿರ್ಭರ್ ಭಾರತ ಅಭಿಯಾನ'ಕ್ಕೆ ದೊಡ್ಡ ಉತ್ತೇಜನ ಸಿಗಲಿದೆ ಎಂದು ಪಿಐಬಿ ಭಾನುವಾರ ಹೇಳಿದೆ.
ಎಂಎಸ್‌ಎಂಇ, ಸ್ಟಾರ್ಟ್ ಅಪ್‌ಗಳು, ಹೊಸ ಉದ್ಯಮಿಗಳು ಸೇರಿದಂತೆ ಕೈಗಾರಿಕೆಗಳನ್ನು ತೊಡಗಿಸುವ ಮೂಲಕ ರಕ್ಷಣೆ ಮತ್ತು ಏರೋಸ್ಪೇಸ್‌ನಲ್ಲಿ ನಾವೀನ್ಯತೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯನ್ನು ಉತ್ತೇಜಿಸಲು ರಕ್ಷಣಾ ಉತ್ಪನ್ನಗಳ ಇಲಾಖೆಯಿಂದ ಐಡೆಕ್ಸ್ ಹಾಗೂ ಡಿಐಓ ರಚನೆ ಮಾಡಲಾಗಿದೆ.
ಡಿಐಓ ಚೌಕಟ್ಟಿನಡಿ ಸುಮಾರು 300 ಸ್ಟಾರ್ಟ್ ಅಪ್‌ಗಳು, ಎಂಎಸ್‌ಎಂಇಗಳು, ವೈಯಕ್ತಿಕ ಉದ್ಯಮಿಗಳು ಮತ್ತು 20 ಪಾಲುದಾರ ಹೊಸ ಉದ್ಯಮಗಳಿಗೆ ಹಣಕಾಸಿನ ನೆರವು ನೀಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಭಾರತೀಯ ರಕ್ಷಣಾ ಮತ್ತು ಏರೋಸ್ಪೇಸ್ ವಲಯಕ್ಕೆ ಹೊಸ, ಸ್ಥಳೀಯ ಮತ್ತು ನವೀನ ತಂತ್ರಜ್ಞಾನಗಳನ್ನು ತ್ವರಿತವಾಗಿ ಅಭಿವೃದ್ಧಿಪಡಿಸಲು ಅನುಕೂಲವಾಗುವಂತೆ ಇದನ್ನು ರಚಿಸಲಾಗಿದೆ.
ಐಡೆಕ್ಸ್ ನೆಟ್‌ವರ್ಕ್ ಸ್ಥಾಪನೆ ಮತ್ತು ನಿರ್ವಹಣೆಗೆ ಡಿಡಿಪಿ ಡಿಐಓಗೆ ಹಣ ಬಿಡುಗಡೆ ಮಾಡುತ್ತದೆ. ರಕ್ಷಣಾ ಮತ್ತು ಏರೋಸ್ಪೇಸ್ ಅಗತ್ಯಗಳಿಗೆ ಸಂಬಂಧಿಸಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪಾಲುದಾರ ಉದ್ಯಮಗಳು ಸೇರಿದಂತೆ ಎಂಎಸ್ಎಂಇ, ಸ್ಟಾರ್ಟ್ ಅಪ್, ತಂತ್ರಜ್ಞಾನ ಕೇಂದ್ರಗಳೊಂದಿಗೆ ಸಂವಹನ ನಡೆಸುವುದು, ಸಂಭಾವ್ಯ ತಂತ್ರಜ್ಞಾನಗಳು ಮತ್ತು ಘಟಕಗಳನ್ನು ಶಾರ್ಟ್‌ಲಿಸ್ಟ್ ಮಾಡಲು ವಿವಿಧ ಹ್ಯಾಕಥಾನ್‌ಗಳನ್ನು ಆಯೋಜಿಸುವುದು, ಸ್ಟಾರ್ಟ್ ಅಪ್‌ಗಳು ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಉತ್ಪನ್ನಗಳನ್ನು ಮೌಲ್ಯಮಾಪನ ಮುಂತಾದ ಕಾರ್ಯಚಟುವಟಿಕೆಗಳಿಗಾಗಿ ಐಡೆಕ್ಸ್ ನೆಟ್‌ವರ್ಕ್ ಕೆಲಸ ಮಾಡಲಿದೆ.