ನವದೆಹಲಿ :ಸುಮಾರು ಐದು ವರ್ಷಗಳ ಕಾಲ ನೀತಿ ಆಯೋಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ರಾಜೀವ್ ಕುಮಾರ್ ಅವರು ಹುದ್ದೆಯಿಂದ ಕೆಳಗಿಳಿದಿದ್ದಾರೆ. ರಾಜೀವ್ ಕುಮಾರ್ ಅವರ ಜಾಗಕ್ಕೆ ಅರ್ಥಶಾಸ್ತ್ರಜ್ಞ ಸುಮನ್ ಕೆ ಬೆರಿ ಅವರು ನೇಮಕವಾಗಲಿದ್ದು, ಮೇ 1ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದ ಅಧಿಸೂಚನೆಯ ಪ್ರಕಾರ ಡಾ.ಸುಮನ್ ಕೆ ಬೆರಿ ಅವರನ್ನು 'ತಕ್ಷಣದಿಂದ ಜಾರಿಗೆ ಬರುವಂತೆ' ನೀತಿ ಆಯೋಗದ ಪೂರ್ಣ ಸಮಯದ ಸದಸ್ಯರಾಗಿ ನೇಮಕ ಮಾಡಿದೆ. ಸಂಪುಟದ ನೇಮಕಾತಿ ಸಮಿತಿಯು ಹೊರಡಿಸಿರುವ ಅಧಿಸೂಚನೆಯಲ್ಲಿ ರಾಜೀವ್ ಕುಮಾರ್ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಏಪ್ರಿಲ್ 30ರಂದು ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದೆ.
ಮೇ 1, 2022ರಿಂದ ಮುಂದಿನ ಆದೇಶಗಳವರೆಗೆ ಜಾರಿಗೆ ಬರುವಂತೆ ಡಾ.ಸುಮನ್ ಕೆ ಬೆರಿ ಅವರನ್ನು ನೀತಿ ಆಯೋಗದ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗುತ್ತದೆ. ಹಿಂದಿನ ಉಪಾಧ್ಯಕ್ಷರಿಗೆ ಅನ್ವಯಿಸುವ ಅದೇ ನಿಯಮಗಳು ಮತ್ತು ಷರತ್ತುಗಳ ಮೇಲೆ ಅವರನ್ನು ನೇಮಕ ಮಾಡಲಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.