ನವದೆಹಲಿ:ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ 79ನೇ ಜನ್ಮದಿನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಇಂದು ಬೆಳಗ್ಗೆ ದೆಹಲಿಯ 'ವೀರ ಭೂಮಿ'ಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು. ಮಗಳು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಪತಿ ರಾಬರ್ಟ್ ವಾದ್ರಾ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಮಾಜಿ ಪ್ರಧಾನಿಯ ಸಮಾಧಿಗೆ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ವೀರಭೂಮಿಯ ಹೊರಗೆ ರಾಜೀವ್ ಗಾಂಧಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸದ್ಯ ಲಡಾಖ್ ಪ್ರವಾಸದಲ್ಲಿದ್ದು ತಮ್ಮ ತಂದೆಯನ್ನು ಸ್ಮರಿಸಿದ್ದಾರೆ. ಅಧಿಕೃತ 'X' ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, "ಅಪ್ಪಾ, ನೀವು ಭಾರತದ ಬಗ್ಗೆ ಕಂಡ ಕನಸುಗಳನ್ನು, ಅಮೂಲ್ಯ ನೆನಪುಗಳನ್ನಿಲ್ಲಿ (ಹಾಕಿರುವ ವಿಡಿಯೋ) ತೋರಿಸಲಾಗಿದೆ. ನಿಮ್ಮ ಗುರುತು ನನ್ನ ದಾರಿ. ಪ್ರತಿಯೊಬ್ಬ ಭಾರತೀಯನ ಹೋರಾಟ ಮತ್ತು ಕನಸುಗಳನ್ನು ಅರ್ಥಮಾಡಿಕೊಳ್ಳುವುದು, ಭಾರತಮಾತೆಯ ಧ್ವನಿಯನ್ನು ಆಲಿಸುವುದು ನೀವು ಹಾಕಿಕೊಟ್ಟ ಮಾರ್ಗ" ಎಂದು ಬರೆದಿದ್ದಾರೆ.
ಪ್ಯಾಂಗೊಂಗ್ ಸರೋವರ ದಡದಲ್ಲಿ ರಾಹುಲ್ ಗಾಂಧಿ:ರಾಜೀವ್ ಗಾಂಧಿ ಜನ್ಮದಿನದ ಅಂಗವಾಗಿ ಇಂದು ಪ್ಯಾಂಗೊಂಗ್ ಸರೋವರ ದಡದಲ್ಲಿ ಪ್ರಾರ್ಥನಾ ಸಭೆ ನಡೆಯಿತು. ರಾಹುಲ್ ಗಾಂಧಿ ತಮ್ಮ ತಂದೆಯ ಜನ್ಮದಿನವನ್ನು ವಿಶೇಷವಾಗಿ ಆಚರಿಸಲು ಈ ಸರೋವರಕ್ಕೆ ಬೈಕ್ ರೈಡ್ ಮೂಲಕ ಆಗಮಿಸಿದ್ದಾರೆ.