ಚೆನ್ನೈ(ತಮಿಳುನಾಡು): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಆರು ಮಂದಿ ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ನವೆಂಬರ್ 11 ರಂದು ಆದೇಶ ನೀಡಿದ್ದು, ಇಂದು ಕೈದಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಬಂಧೀಖಾನೆ ಇಲಾಖೆ ತಿಳಿಸಿದೆ.
ಹತ್ಯೆ ಪ್ರಕರಣದಲ್ಲಿ 7 ಮಂದಿ ಭಾಗಿಯಾಗಿದ್ದು, 7 ಮಂದಿಯಲ್ಲಿ ಪೆರರಿವಾಳನ್ ಅವರನ್ನು ಮೇ 18ರಂದು ವಿಶೇಷ ಸೆಕ್ಷನ್ 142 ಅಡಿ ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿತ್ತು. ಅದಾದ ಬಳಿಕ ಉಳಿದ ಆರು ಮಂದಿಯಲ್ಲಿ ಕಳೆದ ಆಗಸ್ಟ್‌ನಲ್ಲಿ ನಳಿನಿ ಮತ್ತು ರವಿಚಂದ್ರನ್ ಅದೇ ಸೆಕ್ಷನ್ ಬಳಸಿ ಬಿಡುಗಡೆ ಮಾಡುವಂತೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.
ಇದೀಗ ಆರು ಅಪರಾಧಿಗಳಾದ ನಳಿನಿ, ರವಿಚಂದ್ರನ್, ಮುರುಗನ್, ರಾಬರ್ಟ್ ಬಯಾಸ್, ಜಯಕುಮಾರ್, ಸಂತನ್ ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ವೆಲ್ಲೂರು ಜೈಲಿನಲ್ಲಿದ್ದ ನಳಿನಿ ಹಾಗೂ ತೂತುಕುಡಿ ಜೈಲಿನಲ್ಲಿರುವ ರವಿಚಂದ್ರನ್ ಸದ್ಯ ಪೆರೋಲ್ ಮೇಲಿದ್ದಾರೆ. ಸಂತನ್ ಮತ್ತು ಮುರುಗನ್ ವೆಲ್ಲೂರು ಜೈಲಿನಲ್ಲಿದ್ದು, ಜಯಕುಮಾರ್ ಮತ್ತು ರಾಬರ್ಟ್ ಬಯಾಸ್ ಚೆನ್ನೈ ಪುಝಲ್ ಜೈಲಿನಲ್ಲಿದ್ದಾರೆ.