ಕರ್ನಾಟಕ

karnataka

ETV Bharat / bharat

'ಗಾಂಧಿ ಕುಟುಂಬ ಆ ದುರಂತದಿಂದ ಹೊರಬರುವ ಭರವಸೆ ಇದೆ, ಭೇಟಿ ಮಾಡುವ ಯೋಚನೆ ಇಲ್ಲ'

ದೇಶದಲ್ಲೇ ಅತಿ ಹೆಚ್ಚು ಕಾಲ ಜೀವಾವಧಿ ಶಿಕ್ಷೆ ಅನುಭವಿಸಿದ ಮಹಿಳಾ ಕೈದಿ ನಳಿನಿ ಶ್ರೀಹರನ್ ಅವರು ಸುಪ್ರೀಂ ಕೋರ್ಟ್‌ನ ಮಹತ್ವದ ಆದೇಶದ ಮೇರೆಗೆ ವೆಲ್ಲೂರು ಜೈಲಿನಿಂದ ಶನಿವಾರ ಬಿಡುಗಡೆಯಾದರು.

Nalini Sriharan
ನಳಿನಿ ಶ್ರೀಹರನ್

By

Published : Nov 13, 2022, 9:37 AM IST

Updated : Nov 13, 2022, 9:59 AM IST

ಚೆನ್ನೈ(ತಮಿಳುನಾಡು):ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರು ಅಪರಾಧಿಗಳಲ್ಲಿ ಒಬ್ಬರಾದ ನಳಿನಿ ಶ್ರೀಹರನ್ ಅವರು 32 ವರ್ಷಗಳ ಸುದೀರ್ಘ ಶಿಕ್ಷೆಯ ಸಮಯದಲ್ಲಿ ತನಗೆ ಸಹಾಯ ಮಾಡಿದ ತಮಿಳುನಾಡು ಮತ್ತು ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ವೆಲ್ಲೂರು ಜೈಲಿನಿಂದ ಶನಿವಾರ ಬಿಡುಗಡೆಯಾದ ನಂತರ ಗಾಂಧಿ ಕುಟುಂಬದ ಯಾರನ್ನಾದರೂ ಭೇಟಿಯಾಗುತ್ತೀರಾ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ನಳಿನಿ, 'ಅವರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ. ದುರಂತದಿಂದ ಶಾಶ್ವತವಾಗಿ ಅವರು ಹೊರಬರುವ ಭರವಸೆ ನನಗಿದೆ. ನಾನು ಗಾಂಧಿ ಕುಟುಂಬದ ಯಾರನ್ನೂ ಭೇಟಿ ಮಾಡಲು ಯೋಜಿಸುತ್ತಿಲ್ಲ. ನನಗಾಗಿ ಬಹಳ ಸಮಯದಿಂದ ಕಾಯುತ್ತಿರುವ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುತ್ತೇನೆ' ಎಂದು ಹೇಳಿದರು.

ಜೈಲಿನಲ್ಲಿರುವ ಅಪರಾಧಿಗಳ ಸನ್ನಡತೆಯ ಆಧಾರದ ಮೇಲೆ ಸುಪ್ರಿಂ ಕೋರ್ಟ್‌ ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಮತ್ತು ಬಿ.ವಿ ನಾಗರತ್ನ ಅವರಿದ್ದ ದ್ವಿಸದಸ್ಯ ಪೀಠ ನೀಡಿದ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ನ್ಯಾಯಾಧೀಶರು ಪ್ರಕರಣಗಳನ್ನು ಅಧ್ಯಯನ ಮಾಡಿದ್ದಾರೆ ಮತ್ತು ಏನು ತಪ್ಪು ಎಂದು ಅವರಿಗೆ ತಿಳಿದಿದೆ' ಎಂದರು.

ನಳಿನಿ ಶ್ರೀಹರನ್ ಯಾರು?:ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಗಳಾಗಿರುವ ನಳಿನಿ ಶ್ರೀಹರನ್ ವಿದ್ಯಾವಂತ ಮಲಯಾಳಂ ಕುಟುಂಬದಲ್ಲಿ ಬೆಳೆದವರು. ತಂದೆ ಚೆನ್ನೈ ಪೊಲೀಸ್ ಇನ್ಸ್‌ಪೆಕ್ಟರ್‌ ಆಗಿದ್ದ ದಿವಂಗತ ಪಿ ಶಂಕರ ನಾರಾಯಣನ್‌ (ಮೂಲತ: ಕೇರಳದವರು) ಮತ್ತು ತಾಯಿ ನರ್ಸ್‌ ಆಗಿದ್ದ ದಿ.ಪದ್ಮಾವತಿ (ಚೆನ್ನೈಯವರು) ಅವರಿಗೆ ಜನಿಸಿದ ಮೂವರು ಮಕ್ಕಳಲ್ಲಿ ಈಕೆ ಒಬ್ಬರು.

'ಜನರು ನಮ್ಮನ್ನು ಕೊಲೆಗಾರರ ​​ಬದಲಿಗೆ ಬಲಿಪಶುಗಳೆಂದು ನೋಡಬೇಕು':ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಆರು ಅಪರಾಧಿಗಳಲ್ಲಿ ಒಬ್ಬರಾದ ರವಿಚಂದ್ರನ್ ಅವರನ್ನು ಮಧುರೈ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಉತ್ತರ ಭಾರತದ ಜನರು ನಮ್ಮನ್ನು ಕೊಲೆಗಾರರ ​​ಬದಲಿಗೆ ಬಲಿಪಶುಗಳಾಗಿ ನೋಡಬೇಕು. ಯಾರು ಭಯೋತ್ಪಾದಕ ಅಥವಾ ಸ್ವಾತಂತ್ರ್ಯ ಹೋರಾಟಗಾರ ಎಂಬುದನ್ನು ಸಮಯ ನಿರ್ಧರಿಸುತ್ತದೆ. ಆದರೆ ನಾವು ಭಯೋತ್ಪಾದಕರೆಂದು ದೂಷಿಸಿದರೂ ಸಮಯವು ನಮ್ಮನ್ನು ನಿರಪರಾಧಿ ಎಂದು ನಿರ್ಣಯಿಸುತ್ತದೆ' ಎಂದರು.

ಸುಪ್ರೀಂ ತೀರ್ಪು ಸ್ವಾಗತಿಸಿದ ಸ್ಟಾಲಿನ್:ರಾಜೀವ್ ಗಾಂಧಿ ಹತ್ಯೆ ಪ್ರಕರಣದ ನಳಿನಿ ಶ್ರೀಹರನ್ ಸೇರಿದಂತೆ ಆರು ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಸ್ವಾಗತಿಸಿದ್ದಾರೆ. 'ಆರು ವ್ಯಕ್ತಿಗಳ ಬಿಡುಗಡೆ ಕುರಿತು ಸುಪ್ರೀಂ ಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ' ಎಂದು ಶುಕ್ರವಾರ ಟ್ವೀಟ್ ಮಾಡಿದ್ದಾರೆ. ನಳಿನಿ ಹೊರತುಪಡಿಸಿ ರವಿಚಂದ್ರನ್, ರಾಬರ್ಟ್ ಪಾಯಸ್, ಜಯಕುಮಾರ್, ಎಸ್.ರಾಜಾ ಮತ್ತು ಶ್ರೀಹರನ್ ಪ್ರಕರಣದ ಇತರ ಅಪರಾಧಿಗಳು. ಜನರಿಂದ ಆಯ್ಕೆಯಾದ ಸರ್ಕಾರದ ನಿರ್ಧಾರಗಳನ್ನು ರಾಜ್ಯಪಾಲರು ನೇಮಿಸಿದ ಸ್ಥಾನಗಳಲ್ಲಿ ಕೈಬಿಡಬಾರದು ಎಂಬುದಕ್ಕೆ ಈ ತೀರ್ಪು ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜೀವ್ ಗಾಂಧಿ ಹತ್ಯೆ ಪ್ರಕರಣ: ರಾಜೀವ್ ಗಾಂಧಿ ಮೇ 21, 1991 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಸಾರ್ವಜನಿಕ ರ‍್ಯಾಲಿಯಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ಗುಂಪಿನ ಮಹಿಳಾ ಆತ್ಮಾಹುತಿ ಬಾಂಬರ್‌ನಿಂದ ಹತ್ಯೆಗೀಡಾಗಿದ್ದರು. ಹತ್ಯೆಯಲ್ಲಿ ಭಾಗಿಯಾದ ಏಳು ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗಿತ್ತು. ಅವರಲ್ಲಿ ನಳಿನಿ ಶ್ರೀಹರನ್, ಆರ್‌.ಪಿ ರವಿಚಂದ್ರನ್, ಜಯಕುಮಾರ್, ಸಂತನ್, ಮುರುಗನ್, ರಾಬರ್ಟ್ ಪಯಸ್ ಮತ್ತು ಎ.ಜಿ ಪೆರಾರಿವಾಲನ್ ಸೇರಿದ್ದರು.

2000ರಲ್ಲಿ ನಳಿನಿ ಶ್ರೀಹರನ್ ಅವರ ಶಿಕ್ಷೆಯನ್ನು ಜೀವಾವಧಿಗೆ ಇಳಿಸಲಾಯಿತು. ನಂತರ 2014 ರಲ್ಲಿ ಇತರ ಆರು ಅಪರಾಧಿಗಳ ಶಿಕ್ಷೆಯನ್ನು ಸಹ ಜೀವಾವಧಿಗೆ ಕಡಿತಗೊಳಿಸಲಾಗಿತ್ತು. ಅದೇ ವರ್ಷದಲ್ಲಿ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಜಯಲಲಿತಾ ಅವರು ಪ್ರಕರಣದ ಎಲ್ಲಾ ಏಳು ಅಪರಾಧಿಗಳನ್ನು ಬಿಡುಗಡೆ ಮಾಡಲು ಶಿಫಾರಸು ಮಾಡಿದ್ದರು.

ಇದನ್ನೂ ಓದಿ:ರಾಜೀವ್​ ಗಾಂಧಿ ಹತ್ಯೆ ಪ್ರಕರಣ: ಆರು ಮಂದಿ ಅಪರಾಧಿಗಳು ಜೈಲಿನಿಂದ ರಿಲೀಸ್​

Last Updated : Nov 13, 2022, 9:59 AM IST

ABOUT THE AUTHOR

...view details