ನವದೆಹಲಿ: ದೇಶದಲ್ಲಿ ನಿನ್ನೆಯಿಂದ ಮೂರನೇ ಹಂತದ ಕೋವಿಡ್ ಲಸಿಕೆ ಅಭಿಯಾನ ಆರಂಭಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕರು ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಇಂದು ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ತಮ್ಮ ಮನೆಯಲ್ಲೇ ಲಸಿಕೆ ಹಾಕಿಸಿಕೊಂಡಿರುವುದು ವಿವಾದಕ್ಕೆ ಎಡೆ ಮಾಡಿದೆ.
ರಾಜ್ಯದಿಂದ ವರದಿ ಕೇಳಿದ ಕೇಂದ್ರ ಸರ್ಕಾರ ನರ್ಸ್ಗಳನ್ನು ಮನೆಗೆ ಕರೆಯಿಸಿಕೊಂಡು ಸಚಿವ ಬಿ.ಸಿ.ಪಾಟೀಲ್ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದು, ಇದರ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ. ಇದೇ ವಿಚಾರವಾಗಿ ಮಾತನಾಡಿರುವ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್, ಕೋವಿಡ್ ಪ್ರೋಟೋಕಾಲ್ನಲ್ಲಿ ಇದಕ್ಕೆ ಅನುಮತಿ ಇಲ್ಲ. ಈಗಾಗಲೇ ರಾಜ್ಯ ಸರ್ಕಾರದಿಂದ ವರದಿ ಕೇಳಿದ್ದೇವೆ ಎಂದಿದ್ದಾರೆ.
ಬಿ.ಸಿ.ಪಾಟೀಲ್ ಸಮರ್ಥನೆ ಏನು?
'ಮನೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದು ದೊಡ್ಡ ವಿಷಯವೇನಲ್ಲ. ಅದರಲ್ಲಿ ತಪ್ಪೇನಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸಮರ್ಥನೆ ನೀಡಿದ್ದಾರೆ. ನಾವೇನು ಅಪರಾಧ ಮಾಡಿದ್ದೇವಾ?, ಕಳ್ಳತನ ಮಾಡಿದ್ದೇವಾ? ನಾನು ಸರ್ಕಾರದ ಒಂದು ಭಾಗ' ಎಂದಿದ್ದಾರೆ.
ಇದನ್ನೂ ಓದಿ: ಮನೆಯಲ್ಲೇ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಕ್ಕೆ ಬಿ.ಸಿ. ಪಾಟೀಲ್ ಕೊಟ್ಟ ಕಾರಣ ಹೀಗಿದೆ..
'ನಾನು ಮನೆಯಲ್ಲಿ ಲಸಿಕೆ ಹಾಕಿಸಿಕೊಂಡು ಮಾದರಿಯಾಗಿದ್ದೇನೆ. ಈ ವಿಷಯ ಎಲ್ಲರಿಗೂ ತಿಳಿಯಿತು. ಇದರಿಂದ ಇನ್ನಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಾರೆ. ನಾನು ಆಸ್ಪತ್ರೆಗೆ ಹೋದರೆ ಜನಸಾಮಾನ್ಯರ ಚಿಕಿತ್ಸೆಗೆ ತೊಂದರೆಯಾಗುತ್ತಿತ್ತು. ಜನರು ಗುಂಪಾಗುತ್ತಿದ್ದರು. ಆದರೆ ಮನೆಯಲ್ಲಿ ಎಲ್ಲರೂ ಕಾಯುತ್ತಿದ್ದರು. ಹೀಗಾಗಿ ಮನೆಯಲ್ಲೇ ಲಸಿಕೆ ಹಾಕಿಸಿಕೊಂಡಿದ್ದೇನೆ' ಎಂದು ಕೃಷಿ ಸಚಿವರು ಸಮರ್ಥನೆ ನೀಡಿದ್ದಾರೆ.