ನವದೆಹಲಿ:ಭಾರತದಲ್ಲಿ ನಿಷೇಧ ಬೆದರಿಕೆ, ತನ್ನ ಉದ್ಯೋಗಿಗಳ ಮೇಲೆ ದಾಳಿ ನಡೆಸಿದೆ ಎಂದು ಜನಪ್ರಿಯ ಮೈಕ್ರೋಬ್ಲಾಗಿಂಗ್ ಸಂಸ್ಥೆ ಟ್ವಿಟರ್ನ ಮಾಜಿ ಸಿಇಒ ಜಾಕ್ ಡಾರ್ಸಿ ಗುರುತರ ಆಪಾದನೆ ಮಾಡಿದ್ದು, ಇದಕ್ಕೆ ಕೇಂದ್ರ ಸರ್ಕಾರ ತಿರುಗೇಟು ನೀಡಿದೆ. 'ಇದೊಂದು ಅಪ್ಪಟ ಸುಳ್ಳು. ಹಾಗಾಗಿದ್ದರೆ, ಈವರೆಗೆ ಒಬ್ಬ ಸಿಬ್ಬಂದಿಯೂ ಜೈಲಿಗೆ ಹೋಗಿಲ್ಲ ಯಾಕೆ?' ಎಂದು ಪ್ರಶ್ನಿಸಿದೆ.
ಸಂದರ್ಶನವೊಂದರಲ್ಲಿ ಜಾಕ್ ಡಾರ್ಸಿ ಭಾರತದ ಕಾನೂನುಗಳು ಮತ್ತು ಪ್ರಜಾಪ್ರಭುತ್ವದ ಮೇಲೆ ಕಪ್ಪುಚುಕ್ಕಿ ಇಡುವಂತೆ ಮಾತನಾಡಿದ್ದು, ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿದ್ದ ಹೋರಾಟದ ವೇಳೆ ಕೆಲ ಟ್ವೀಟ್ಗಳನ್ನು ಅಳಿಸುವಂತೆ ಭಾರತ ಸರ್ಕಾರ ನಿರ್ದೇಶನ ನೀಡಿತ್ತು. ಇಲ್ಲವಾದಲ್ಲಿ ದೇಶದಲ್ಲಿ ಟ್ವಿಟರ್ ನಿಷೇಧ ಮಾಡಲಾಗುವುದು ಬೆದರಿಕೆ ಹಾಕಿತ್ತು. ಕೆಲ ಸಿಬ್ಬಂದಿ ಮನೆ ಮೇಲೂ ದಾಳಿ ಮಾಡಿಸಿತ್ತು ಎಂದು ಹೇಳಿದ್ದಾರೆ.
ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಡಾರ್ಸಿ ಮಾಡಿದ ಆರೋಪಗಳೆಲ್ಲವೂ ನಿರಾಧಾರ ಮತ್ತು ಅಪ್ಪಟ ಸುಳ್ಳು ಹೇಳಿಕೆ. ಭಾರತದ ಮೇಲೆ ಸುಖಾಸುಮ್ಮನೆ ಗೂಬೆ ಕೂರಿಸುವ ಕೆಲಸವಾಗಿದೆ. ಟ್ವಿಟರ್ ಸಿಬ್ಬಂದಿ ಮನೆ ಮೇಲೆ ದಾಳಿ ನಡೆದಿದ್ದರೆ, ಯಾಕೆ ಒಬ್ಬರೂ ಕೂಡ ಜೈಲು ಪಾಲಾಗಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ದೇಶದ ಕಾನೂನು ಉಲ್ಲಂಘನೆ:ಡಾರ್ಸಿ ಸಿಇಒ ಆಗಿದ್ದ ವೇಳೆ ಟ್ವಿಟರ್ ದೇಶದ ಕಾನೂನುಗಳನ್ನು ಉಲ್ಲಂಘನೆ ಮಾಡಿತ್ತು. ಇದು ಸಂಸ್ಥೆಯ ಕಾರ್ಯಾಚರಣೆ ರೀತಿಯನ್ನು ತೋರಿಸುತ್ತದೆ. ಇನ್ನೊಂದು ದೇಶದ ಕಾನೂನು ಮತ್ತು ಸಾರ್ವಭೌಮತ್ವ ಒಪ್ಪಲು ಡಾರ್ಸಿಗೆ ಸಾಧ್ಯವಾಗಿಲ್ಲ. ಅವರ ಈ ಹೇಳಿಕೆ ಟ್ವಿಟರ್ ಇತಿಹಾಸದ ಸಂಶಯಾಸ್ಪದ ಅವಧಿಯನ್ನು ಹೊರಹಾಕುವ ಪ್ರಯತ್ನವಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಮೂದಲಿಸಿದ್ದಾರೆ.
ವಾಸ್ತವವಾಗಿ ಟ್ವಿಟರ್ ಸಂಸ್ಥೆ 2020 ರಿಂದ 2022 ರವರೆಗೆ ಪದೇ ಪದೆ ದೇಶದ ಕಾನೂನನ್ನು ಉಲ್ಲಂಘಿಸಿದೆ. ಯಾರ ಮೇಲೂ ದಾಳಿ ಮಾಡಿಲ್ಲ ಅಥವಾ ಜೈಲಿಗೆ ಕಳುಹಿಸಲಾಗಿಲ್ಲ. ನಮ್ಮ ಗಮನ ಭಾರತೀಯ ಕಾನೂನುಗಳ ಪಾಲನೆ ಮಾಡುವುದಾಗಿತ್ತು. ಡಾರ್ಸೆ ಅವರ ಅವಧಿಯಲ್ಲಿ ಟ್ವಿಟರ್ ಭಾರತೀಯ ಕಾನೂನಿನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ ಚಂದ್ರಶೇಖರ್ ಹೇಳಿದ್ದಾರೆ.