ನವದೆಹಲಿ: ಭಾರತೀಯ ಸೇನೆಗೆ ಸೇರಲು ಇಚ್ಛಿಸಿ ರಾಜಸ್ಥಾನದ ಸಿಖಾರ್‌ನ ಯುವಕನೊಬ್ಬ ಕೈಯಲ್ಲಿ ತ್ರಿವರ್ಣ ಧ್ವಜದೊಂದಿಗೆ 50 ಗಂಟೆಗಳಲ್ಲಿ 300 ಕಿ.ಮೀ ದೂರ ಓಡಿ ಗಮನ ಸೆಳೆದಿದ್ದಾನೆ. ಸುರೇಶ್ ಭಿಚಾರ್ (24) ಮಾರ್ಚ್ 29 ರಂದು ರಾತ್ರಿ 9 ಗಂಟೆಗೆ ಸಿಖಾರ್ ಜಿಲ್ಲಾ ಕ್ರೀಡಾಂಗಣದಿಂದ ಓಡಲು ಪ್ರಾರಂಭಿಸಿದ್ದು, ಏಪ್ರಿಲ್ 2ರಂದು ಸಂಜೆ 6 ಗಂಟೆಗೆ ದೆಹಲಿಗೆ ತಲುಪಿದ್ದಾರೆ. ದೆಹಲಿಯಲ್ಲಿ ಸಂಸದ ಹನುಮಾನ್ ಬೇನಿವಾಲ್ ಭೇಟಿಯಾಗಿ ಸೇನಾ ನೇಮಕಾತಿಯಲ್ಲಿನ ವಿಳಂಬದ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದಾನೆ.
'ಸೇನೆ ಸೇರುವುದು ನನ್ನ ಮಹದಾಸೆ. ಆದರೆ, 2 ವರ್ಷಗಳಿಂದ ನೇಮಕಾತಿ ನಡೆಯುತ್ತಿಲ್ಲ. ನಾಗೌರ್, ಸಿಖಾರ್ ಮತ್ತು ಜುಂಜುನುವಿನಲ್ಲಿ ಯುವಕರನ್ನು ಸೇನಾ ನೇಮಕಾತಿಗೆ ಪರಿಗಣಿಸದಿದ್ದರೆ ವಯಸ್ಸಿನ ಅರ್ಹತೆಯ ಮಾನದಂಡವನ್ನು ಎದುರಿಸಬೇಕಾಗುತ್ತದೆ. ಹೀಗಾಗಿ, ಯುವಕರ ಉತ್ಸಾಹ ಹೆಚ್ಚಿಸಲು ದೆಹಲಿಗೆ ಓಡಿ ಬಂದಿದ್ದೇನೆ' ಎಂದು ಯುವಕ ಹೇಳಿದ್ದಾನೆ.