ಜಲೋರ್ (ರಾಜಸ್ಥಾನ): ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮದುವೆ ವಿಚಾರವಾಗಿ ಅತ್ತಿಗೆ ಸೇರಿದಂತೆ ಇಬ್ಬರನ್ನು ಸಹೋದರರಿಬ್ಬರು ಸೇರಿಕೊಂಡು ಕೊಲೆ ಮಾಡಿದ್ದಾರೆ. ತಮಗೆ ಮದುವೆಯಾಗುವ ಮುನ್ನವೇ ಮಗಳಿಗೆ ಮದುವೆ ಮಾಡಲು ಮುಂದಾಗಿದ್ದ ಹಿನ್ನೆಲೆಯಲ್ಲಿ ಅತ್ತಿಗೆಯನ್ನು ಹತ್ಯೆ ಮಾಡಿದ್ದಾರೆ. ಇದೇ ವೇಳೆ ಮಧ್ಯಪ್ರವೇಶಿಸಲು ಬಂದ ತಮ್ಮ ನೆರೆಹೊರೆ ವ್ಯಕ್ತಿಯನ್ನೂ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಮೊದ್ರಾನ್ ಗ್ರಾಮದ ನಿವಾಸಿ, ಇಂದ್ರ ಕನ್ವರ್ (45) ಎಂಬ ಮಹಿಳೆ ಮತ್ತು ಹರಿ ಸಿಂಗ್ ಎಂಬುವವರೇ ಕೊಲೆಯಾದವರು ಎಂದು ಗುರುತಿಸಲಾಗಿದೆ. ಡುಂಗರ್ ಸಿಂಗ್ ಹಾಗೂ ಪಹಾರ್ ಸಿಂಗ್ ಎಂಬುವವರೇ ಈ ಕೊಲೆಗಳ ಆರೋಪಿಗಳಾಗಿದ್ದಾರೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ.
ರತನ್ ಸಿಂಗ್ ಅವರ ಪತ್ನಿಯಾದ ಇಂದ್ರ ಕನ್ವರ್ ಅವರ ಮಗಳ ಮದುವೆಗೆ ಸಂಬಂಧಿಸಿದ ಆತೇ ಸಾಥೇ (Aaate-Saate) ಆಚರಣೆಯನ್ನು ಮನೆಯಲ್ಲಿ ಆಯೋಜಿಸಿದ್ದರು. ಆದರೆ, ಡುಂಗರ್ ಸಿಂಗ್ ಮತ್ತು ಪಹಾರ್ ಸಿಂಗ್ ಬಂದು ಈ ಆಚರಣೆಯನ್ನು ವಿರೋಧಿಸಿ, ಗಲಾಟೆ ಶುರು ಮಾಡಿದ್ದಾರೆ. ನಮಗಿಂತ ಮೊದಲು ಮಗಳ ಮದುವೆ ಹೇಗೆ ಮಾಡಲಾಗುತ್ತಿದೆ ಎಂದು ತಗಾದೆ ತೆಗೆದಿದ್ದಾರೆ.
ಇದನ್ನೂ ಓದಿ:ಹೊಂಡ, ಗುಂಡಿಗಳ ರಸ್ತೆಯಲ್ಲಿ ಹಿಂಸಾತ್ಮಕ ಸಂಚಾರ: ಮಹಿಳೆಗೆ ಹಠಾತ್ ಹೆರಿಗೆ ನೋವು, ರಸ್ತೆಯಲ್ಲೇ ಮಗುವಿಗೆ ಜನ್ಮ
ಇದರಿಂದ ಜಗಳ ಆರಂಭವಾಗಿದೆ. ಬಳಿಕ ಈ ಜಗಳ ವಿಕೋಪಕ್ಕೆ ತಿರುಗಿದ್ದು, ಇಬ್ಬರು ಸಹೋದರರು ಸೇರಿಕೊಂಡು ಅತ್ತಿಗೆ ಇಂದ್ರ ಕನ್ವರ್ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾರೆ. ಆಗ ತನ್ನ ತಾಯಿಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ನೋಡಿದ ಮಗಳು ನೂರು ಮೀಟರ್ ದೂರದಲ್ಲಿರುವ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಧಾವಿಸಿದ್ದಾರೆ. ಆದರೆ, ಪೊಲೀಸರ ತಂಡ ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿ ಸಹೋದರರು ತಮ್ಮ ಅತ್ತಿಗೆಯನ್ನು ಕೊಂದಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತೊಂದೆಡೆ, ಈ ಜಗಳ ಬಿಡಿಸಲು ಮುಂದೆ ಬಂದ ನೆರೆಯ ಹರಿ ಸಿಂಗ್ ಎಂಬಾತನನ್ನು ಚಾಕುವಿನಿಂದ ಇರಿದು, ಇಬ್ಬರು ಸಹೋದರರು ಕೊಲೆ ಮಾಡಿದ್ದಾರೆ. ಇನ್ನು, ಅವಳಿ ಹತ್ಯೆಯ ಬಳಿಕ ಆರೋಪಿಯೊಬ್ಬ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಸದ್ಯ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ರಾಮ್‌ಸಿನ್ ಪೊಲೀಸ್ ಠಾಣೆಯ ಅಧಿಕಾರಿ ಅರವಿಂದ್ ರಾಜ್‌ಪುರೋಹಿತ್ ಮಾಹಿತಿ ನೀಡಿದ್ದಾರೆ.
ಈ ಘಟನೆ ವೇಳೆ ರತನ್ ಸಿಂಗ್ ಅವರ ಪತ್ನಿ ಇಂದ್ರ ಕನ್ವರ್, ತಮ್ಮ ಮಗಳು ಮತ್ತು ಮಗನೊಂದಿಗೆ ಮನೆಯಲ್ಲಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇಂದ್ರ ಕನ್ವರ್ ಮತ್ತು ಹರಿ ಸಿಂಗ್ ಇಬ್ಬರು ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ರಾಜ್‌ಪುರೋಹಿತ್ ಹೇಳಿದ್ದಾರೆ. ಈ ಪ್ರಕರಣದ ತನಿಖೆಯ ಮೇಲ್ವಿಚಾರಣೆಯನ್ನು ಜಾಲೋರ್ ಎಸ್ಪಿ ಕಿರಣ್ ಕಾಂಗ್ ಸಿಧು ಮತ್ತು ಡಿವೈಎಸ್ಪಿ ಸೀಮಾ ಮಾಡುತ್ತಿದ್ದಾರೆ.
ಇದನ್ನೂ ಓದಿ:ಯುವ ಜೋಡಿಯ ಫೋಟೋ ಕ್ಲಿಕ್ಕಿಸಿದ ಆರೋಪ: 65 ವರ್ಷದ ವೃದ್ಧನ ಹೊಡೆದು ಕೊಲೆ