ಜೈಪುರ(ರಾಜಸ್ಥಾನ): ದೇಶಾದ್ಯಂತ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಮನೆ ಮಾಡಿದೆ. 'ಹರ್ ಘರ್ ತಿರಂಗಾ' ಜೊತೆಗೆ 'ಆಜಾದಿ ಕಾ ಅಮೃತ ಮಹೋತ್ಸವ' ಆಚರಣೆ ನಡೆಯುತ್ತಿದೆ. ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಒಟ್ಟು ಸೇರಿ ಏಕಕಾಲದಲ್ಲಿ 6 ದೇಶಭಕ್ತಿ ಗೀತೆಗಳನ್ನು ಒಟ್ಟಿಗೆ ಹಾಡಿ ವಿಶ್ವದಾಖಲೆ ಬರೆದಿದ್ದಾರೆ. ಇಂದು ಬೆಳಗ್ಗೆ 10:15ರಿಂದ 10:40ರವರೆಗೆ ಈ ವಿಶಿಷ್ಠ ಕಾರ್ಯಕ್ರಮ ನಡೆಯಿತು.
ದೇಶಭಕ್ತಿ ಗೀತೆ ಹಾಡಿದ 1 ಕೋಟಿಗೂ ಅಧಿಕ ವಿದ್ಯಾರ್ಥಿಗಳು ಇದನ್ನೂ ಓದಿ:600 ಎಕರೆ ದಾನ ಮಾಡಿದ್ರು ಈ ತೆಲಂಗಾಣದ ಗಾಂಧಿ.. ಇಂದು ಕುಟುಂಬಕ್ಕಿಲ್ಲ ಆಸರೆ
ಈ ಕಾರ್ಯಕ್ರಮದ ಸಂದರ್ಭದಲ್ಲಿ ಭಾಗಿಯಾಗಿದ್ದ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ನ ಲಂಡನ್ ಪ್ರತಿನಿಧಿ ಪ್ರಥಮ್ ಭಲ್ಲಾ ಅವರು ಮುಖ್ಯಮಂತ್ರಿ ಅವರಿಗೆ ದೇಶಭಕ್ತಿ ಗೀತೆಗಳ ವಿಶ್ವ ದಾಖಲೆ ಪ್ರಮಾಣಪತ್ರ ಪ್ರತಿ ಹಸ್ತಾಂತರಿಸಿದರು. ರಾಜ್ಯದ 67 ಸಾವಿರ ಸರ್ಕಾರಿ ಹಾಗೂ 50 ಸಾವಿರ ಖಾಸಗಿ ಶಾಲೆಯ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಷ್ಟ್ರಗೀತೆ, ವಂದೇ ಮಾತರಂ, ಸಾರೇ ಜಹಾನ್ ಸೇ ಅಚ್ಚಾ ಹಿಂದೂಸ್ತಾನ್ ಹಮಾರಾ, ಜನಗಣ ಮನ ಸೇರಿದಂತೆ ಆರು ದೇಶಭಕ್ತಿ ಗೀತೆಗಳನ್ನು ವಿದ್ಯಾರ್ಥಿಗಳು ಹಾಡಿದ್ದಾರೆ.
ಸಿಎಂ ಅಶೋಕ್ ಗೆಹ್ಲೊಟ್ ಮಾತನಾಡಿ, "ಇಂದಿನ ಕಾರ್ಯಕ್ರಮ ರಾಜ್ಯದ ಜನತೆಗೆ ಪ್ರೀತಿ, ಸಹೋದರತ್ವದ ಸಂದೇಶ ನೀಡುತ್ತದೆ. ಇಂದಿನ ವಿದ್ಯಾರ್ಥಿಗಳು ಮುಂಬರುವ ಭಾರತದ ಭವಿಷ್ಯ" ಎಂದರು. ಇಂದಿರಾಗಾಂಧಿ, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸರ್ದಾರ್ ಪಟೇಲ್ ಸೇರಿದಂತೆ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಅವರನ್ನು ಸಿಎಂ ಸ್ಮರಿಸಿದರು.