ಫಲೋಡಿ (ರಾಜಸ್ಥಾನ): ರಾಜಸ್ಥಾನದ ಫಲೋಡಿ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಆರು ಜನರು ಮೃತಪಟ್ಟರು. ನಿಂತಿದ್ದ ಕಂಟೇನರ್‌ಗೆ ಬೊಲೆರೋ ಡಿಕ್ಕಿ ಹೊಡೆದು ದುರ್ಘಟನೆ ನಡೆಯಿತು. ಡಿಕ್ಕಿಯ ರಭಸಕ್ಕೆ ಬೊಲೆರೋ ಸಂಪೂರ್ಣ ಜಖಂಗೊಂಡಿದೆ. ಶವಗಳನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು ಎಂದು ಪೊಲೀಸರು ತಿಳಿಸಿದರು.
"ಮೃತರೆಲ್ಲರೂ ಜುನೇಜಾ ಧಾನಿ ನಿವಾಸಿಗಳಾಗಿದ್ದು, 72 ವರ್ಷದ ವೃದ್ಧೆಯಿಂದ 40 ವರ್ಷದೊಳಗಿನವರು. ಇತ್ತೀಚೆಗೆ ಹಜ್ ಯಾತ್ರೆಯಿಂದ ಮರಳಿದ್ದ ಸಂಬಂಧಿಕರನ್ನು ಭೇಟಿ ಮಾಡಲೆಂದು ಪೋಖ್ರಾನ್ ಸಮೀಪದ ಗ್ರಾಮಕ್ಕೆ ಒಟ್ಟಾಗಿ ಬೊಲೆರೋ ಕಾರಿನಲ್ಲಿ ತೆರಳಿದ್ದರು. ಅಲ್ಲಿಂದ ಮರಳಿ ಬರಬೇಕಾದರೆ ಕಲ್ರಾನ್ ಗ್ರಾಮದ ಬಳಿ ಫಲೋಡಿ-ಜೈಸಲ್ಮೇರ್ ಹೆದ್ದಾರಿಯಲ್ಲಿ ನಿಂತಿದ್ದ ಕಂಟೇನರ್‌ಗೆ ಬೊಲೆರೋ ಗುದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ" ಎಂದು ಫಲೋಡಿ ಪೊಲೀಸ್ ಠಾಣಾಧಿಕಾರಿ ಓಂಪ್ರಕಾಶ್ ವಿಷ್ಣೋಯ್ ಹೇಳಿದರು.
"ಅಪಘಾತದಲ್ಲಿ ಬುಲೆರೋದಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಇವರನ್ನು ಫಲೋಡಿಯ ಸರ್ಕಾರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಹಿಳೆಯೊಬ್ಬರನ್ನು ಜೋಧಪುರಕ್ಕೆ ರವಾನಿಸುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಅವರು ಮಾಹಿತಿ ನೀಡಿದರು.