ಜೈಪುರ (ರಾಜಸ್ಥಾನ) :ರಾಜಸ್ಥಾನದಲ್ಲಿ ಕಳೆದ ಐದು ವರ್ಷಗಳ ಕಾಂಗ್ರೆಸ್ ಆಡಳಿತವು ಭೂಮಿ, ಅರಣ್ಯ, ನೀರನ್ನು ಮಾರಾಟ ಮಾಡಿದೆ. ಇದರ ಎಲ್ಲ ಕರ್ಮಕಾಂಡಗಳು ಅವರ ಪಕ್ಷದವರೇ ಬಿಡುಗಡೆ ಮಾಡಿರುವ ಕೆಂಪು ಡೈರಿಯಲ್ಲಿ ನಮೂದಿಸಲಾಗಿದೆ. ಇದರಿಂದ ರಾಜ್ಯದ ಮರ್ಯಾದೆ ರಾಷ್ಟ್ರ ಮಟ್ಟದಲ್ಲಿ ಮಣ್ಣುಪಾಲಾಗಿದೆ. ಸಿಎಂ ಅಶೋಕ್ ಗೆಹ್ಲೋಟ್ ಅವರನ್ನು ಜಾದೂಗಾರ ಎಂದು ಕರೆಯಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾಲು ಸಾಲು ಆರೋಪಗಳನ್ನು ಮಾಡಿದರು.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಬರಾನ್‌ನಲ್ಲಿ ಮಂಗಳವಾರ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಗಲಭೆಕೋರರು ಮತ್ತು ಕ್ರಿಮಿನಲ್‌ಗಳು ರಾಜ್ಯವನ್ನು ಆಳುತ್ತಿದ್ದಾರೆ. ಕಾಂಗ್ರೆಸ್ ರಾಜ್ಯದ ಜನರನ್ನು ಲೂಟಿ ಮಾಡಿದೆ. ನವೆಂಬರ್ 23 ರಂದು ನಡೆಯುವ ಮತದಾನದಲ್ಲಿ ರಾಜ್ಯದ ಜನರು ಕಾಂಗ್ರೆಸ್ ದುರಾಡಳಿತಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಹಿಂದೂಗಳ ಮೇಲೆ ದಾಳಿ:ಕಾಂಗ್ರೆಸ್ ಆಡಳಿತದಲ್ಲಿರುವ ರಾಜಸ್ಥಾನದಲ್ಲಿ ಹಿಂದೂಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಹಬ್ಬಗಳ ವೇಳೆ ಗಲಭೆ ಮತ್ತು ವಿಧ್ವಂಸಕ ಕೃತ್ಯಗಳಿಗೆ ಹಲವು ಹಿಂದೂಗಳು ಬಲಿಯಾಗುತ್ತಿದ್ದಾರೆ. ಇದು ಕಳವಳಕಾರಿ ಸಂಗತಿ. ಕಾಂಗ್ರೆಸ್ ನಾಯಕರು ಸಾರ್ವಜನಿಕರ ಹಿತದ ಬಗ್ಗೆ ತಲೆಕೆಡಿಸಿಕೊಳ್ಳದೇ ಭ್ರಷ್ಟಾಚಾರ ನಡೆಸಿ ಅವರ ಮತ್ತು ಜೇಬು ತುಂಬಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ರಾಜ್ಯದಲ್ಲಿ ಗಲಭೆಕೋರರು, ಅಪರಾಧಿಗಳಿಗೆ ಕೆಂಪು ಹಾಸಿನ ಸ್ವಾಗತ ಇರುತ್ತದೆ ಎಂದು ದೂರಿದರು.