ಜೈಪುರ (ರಾಜಸ್ಥಾನ): ತನ್ನ ಪತ್ನಿಯನ್ನು ತಾಯಿಯಾಗಿಸುವ ನಿಟ್ಟಿನಲ್ಲಿ ಅತ್ಯಾಚಾರ ಪ್ರಕರಣದ ಅಪರಾಧಿಗೆ ಶನಿವಾರ ರಾಜಸ್ಥಾನ ಹೈಕೋರ್ಟ್ 15 ದಿನಗಳ ಪೆರೋಲ್ ನೀಡಿ ಆದೇಶಿಸಿದೆ. ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ಸಮೀರ್ ಜೈನ್ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ನೀಡಿದೆ.
ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ 25 ವರ್ಷದ ರಾಹುಲ್ ಎಂಬ ಅಪರಾಧಿ ಪೋಕ್ಸೋ ಸೇರಿ ವಿವಿಧ ಕಾಯ್ದೆಗಳಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದು, ಸದ್ಯ ರಾಜಸ್ಥಾನದ ಅಲ್ವಾರ್ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಆದರೆ, ಈತನ ಪತ್ನಿ ಬ್ರಿಜೇಶ್ ದೇವಿ ತಾನು ತಾಯಿ ಆಗಬೇಕೆಂಬ ಇಚ್ಛೆ ಹೊಂದಿದ್ದು, ಪತಿಗೆ ಪೆರೋಲ್ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಳು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಅಪರಾಧಿ ರಾಹುಲ್ ಈಗಾಗಲೇ ಎರಡು ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆಯನ್ನು ಅನುಭವಿಸಿದ್ದಾನೆ. ಪೆರೋಲ್ ಅರ್ಜಿ ಸಲ್ಲಿಸಿರುವ ಆರೋಪಿಯ ಯುವ ಪತ್ನಿ ತಾನು ಮಕ್ಕಳಿಲ್ಲದವಳಾಗಿದ್ದು, ಪತಿ ಇಲ್ಲದೆ ದೀರ್ಘಕಾಲ ಬದುಕಬೇಕಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ಸೆರೆವಾಸದಲ್ಲಿರುವ ಅಪರಾಧಿ ಪತಿಯೊಂದಿಗೆ ತನ್ನ ಮದುವೆಯ ಬಂಧ ಉಳಿಸಿಕೊಳ್ಳಲು, ಅದನ್ನು ಮುಂದುವರೆಸಲು ಬಯಸುತ್ತಾರೆ ಎಂಬ ಅಂಶಗಳನ್ನು ಗಮನಿಸಿದೆ.