ಜೈಪುರ(ರಾಜಸ್ಥಾನ):ಕಾಂಗ್ರೆಸ್ ಪಕ್ಷದ 91 ಶಾಸಕರ ರಾಜೀನಾಮೆ ಕುರಿತು ನಿರ್ಧಾರ ತೆಗೆದುಕೊಳ್ಳದ ಕಾರಣ ರಾಜಸ್ಥಾನ ಹೈಕೋರ್ಟ್ ಸ್ಪೀಕರ್ ಮತ್ತು ವಿಧಾನಸಭೆಯ ಕಾರ್ಯದರ್ಶಿಗೆ ನೋಟಿಸ್ ನೀಡಿದೆ. ಪ್ರತಿಪಕ್ಷದ ನಾಯಕ ರಾಜೇಂದ್ರ ರಾಥೋಡ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ(ಪಿಐಎಲ್) ವಿಚಾರಣೆ ನಡೆಸಿದ ನ್ಯಾ.ಎಂಎಂ ಶ್ರೀವಾಸ್ತವ ಮತ್ತು ನ್ಯಾ.ವಿ ಕೆ ಭರ್ವಾನಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಕಳೆದ ಸೆಪ್ಟೆಂಬರ್ 25ರಂದು ಕಾಂಗ್ರೆಸ್ನ 91 ಶಾಸಕರು ವಿಧಾನ ಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದರು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇದಾದ ನಂತರ ಅಕ್ಟೋಬರ್ 18, 19, ನವೆಂಬರ್ 12, 21 ರಂದು ಅರ್ಜಿದಾರರು ಸ್ಪೀಕರ್‌ಗೆ ರಾಜೀನಾಮೆ ಸ್ವೀಕರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಇಷ್ಟೆಲ್ಲಾ ಆದರೂ ರಾಜೀನಾಮೆ ಬಗ್ಗೆ ಸ್ಪೀಕರ್ ಇನ್ನೂ ಯಾವುದೇ ನಿರ್ಧಾರ ತೆಗದುಕೊಂಡಿಲ್ಲ ಪ್ರತಿಪಕ್ಷ ನಾಯಕ ಆರೋಪಿಸಿದ್ದಾರೆ.