ಜೋಧಪುರ್(ರಾಜಸ್ಥಾನ): ಗರ್ಭಿಣಿಯಾಗಬೇಕೆಂಬ ಪತ್ನಿಯ ಆಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕೈದಿ ಪತಿಯೋರ್ವನಿಗೆ ರಾಜಸ್ಥಾನದ ಜೋಧಪುರ್ ಹೈಕೋರ್ಟ್ ಪೀಠ 15 ದಿನಗಳ ಪೆರೋಲ್ ನೀಡಿ ಆದೇಶಿಸಿದೆ. ಅಲ್ಲದೇ, ಮಹಿಳೆಯು ತಾಯಿ ಆಗುವುದರಿಂದ ವಂಚಿತಳಾಗಬಾರದು ಎಂದು ಉಚ್ಛ ನ್ಯಾಯಾಲಯ ಹೇಳಿದೆ.
ನ್ಯಾಯಾಧೀಶರಾದ ಸಂದೀಪ್ ಮೆಹ್ತಾ ಮತ್ತು ಫರ್ಜಂದ್ ಅಲಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಭಿಲ್ವಾರಾ ಜಿಲ್ಲೆಯ ನಿವಾಸಿ ನಂದಲಾಲ್ ಎಂಬಾತನಿಗೆ ಈ 15 ದಿನಗಳ ಪೆರೋಲ್ ಮಂಜೂರು ಮಾಡಿದೆ. ಅಜ್ಮೇರ್ ಜೈಲಿನಲ್ಲಿ ಈತ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಪೆರೋಲ್ ಮೇಲೆ ಹೊರ ಹೋಗಲು 50 ಸಾವಿರ ರೂ. ವೈಯಕ್ತಿಕ ಬಾಂಡ್ ಅನ್ನು ಜೈಲಿನ ಅಧೀಕ್ಷಕರಿಗೆ ಸಲ್ಲಿಸುವಂತೆ ನ್ಯಾಯ ಪೀಠ ಸೂಚಿಸಿದೆ.