ಜೈಪುರ(ರಾಜಸ್ತಾನ):ರಾಜಸ್ತಾನ ಸರ್ಕಾರ ಎಲ್ಲಾ 200 ಶಾಸಕರಿಗೆ ದುಬಾರಿ ಮೊತ್ತದ ಐಫೋನ್ ಮೊಬೈಲ್ ಉಡುಗೊರೆಯಾಗಿ ನೀಡಿದೆ. ಆದರೆ, ರಾಜ್ಯದ ಬಿಜೆಪಿ ಶಾಸಕರು ಸರ್ಕಾರದ ಈ ಉಡುಗೊರೆಯನ್ನು ವಾಪಸ್ ನೀಡಲು ಮುಂದಾಗಿದ್ದಾರೆ.
ವಿಧಾನಸಭೆ ಕಾಗದರಹಿತವಾಗಿ ಮಾಡಲು, ಕಾಂಗ್ರೆಸ್ ಸರ್ಕಾರ ಬಜೆಟ್ ಮಂಡನೆಯ ವೇಳೆ ನೆರವಾಗಲು ಎಲ್ಲಾ ಶಾಸಕರಿಗೆ ಐಫೋನ್ ನೀಡಿದೆ. ಆದರೆ, ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಶಾಸಕರು ದುಬಾರಿ ಐಫೋನ್ ಅನ್ನು ಹಿಂದಿರುಗಿಸಲು ನಿರ್ಧರಿಸಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ನಿನ್ನೆಯಷ್ಟೇ (ಬುಧವಾರ) ಬಜೆಟ್ ಮಂಡಿಸಿದ ಬಳಿಕ ಸದನದ ಎಲ್ಲಾ ಶಾಸಕರಿಗೆ 70 ಸಾವಿರ ರೂಪಾಯಿ ಮೌಲ್ಯದ ಐಫೋನ್ 13 ಮೊಬೈಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ರಾಜಸ್ತಾನ ವಿಧಾನಸಭೆ ಕಾಗದರಹಿತವಾಗಿ ನಡೆಯುತ್ತಿದ್ದು, ಸದನದ ಸದಸ್ಯರನ್ನು ಹೈಟೆಕ್ ಮಾಡುವ ಉದ್ದೇಶದಿಂದ ಸ್ಮಾರ್ಟ್ಫೋನ್ಗಳನ್ನು ನೀಡಲಾಗಿದೆ ಎಂದು ಸರ್ಕಾರದ ಸಚಿವರೊಬ್ಬರು ಈ ಬಗ್ಗೆ ತಿಳಿಸಿದ್ದಾರೆ.