ಭರತ್‌ಪುರ (ರಾಜಸ್ಥಾನ):ಇಲ್ಲಿನ ಕಮಾನ್ ಬ್ರಜ್ ನಗರದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ಮಹಿಳೆಯೊಬ್ಬರು ವಿಶಿಷ್ಟ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವನ್ನು ನೋಡಿದ ಆಸ್ಪತ್ರೆಯ ಸಿಬ್ಬಂದಿ ಅರೆಕ್ಷಣ ಅಚ್ಚರಿಗೊಂಡರು. ಈ ಮಗುವನ್ನು ನೋಡಲು ಆಸ್ಪತ್ರೆಯಲ್ಲಿ ಜನಜಂಗುಳಿ ನೆರೆದಿತ್ತು. ಏಕೆಂದರೆ, ಈ ಮಗುವಿನ ಕೈ, ಕಾಲುಗಳಲ್ಲಿ 20 ಬೆರಳುಗಳ ಬದಲು 26 ಬೆರಳುಗಳಿದ್ದವು!.
ಮಗುವಿನ ಕೈ ಮತ್ತು ಕಾಲ್ಬೆರಳುಗಳು ನೈಸರ್ಗಿಕವಾಗಿ ವಿಭಿನ್ನವಾಗಿವೆ. ಪ್ರತಿ ಕೈಯಲ್ಲಿ ಏಳೇಳು ಬೆರಳುಗಳಿವೆ. ಕಾಲಿನಲ್ಲಿ ಆರಾರು ಬೆರಳುಗಳಿವೆ. ಇದೀಗ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.
ಕಮಾನ್ ಪಟ್ಟಣದ ಗೋಪಿನಾಥ ಮೊಹಲ್ಲಾದ ನಿವಾಸಿ ಹಾಗು ಸಿಆರ್‌ಪಿಎಫ್ ಹೆಡ್ ಕಾನ್‌ಸ್ಟೆಬಲ್ ಗೋಪಾಲ್ ಭಟ್ಟಾಚಾರ್ಯ ಅವರ ಪತ್ನಿ ಸರಜೂ ಭಟ್ಟಾಚಾರ್ಯ ಈ ವಿಶೇಷ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಈ ಆಸ್ಪತ್ರೆಯಲ್ಲಿ 26 ಬೆರಳುಗಳುಳ್ಳ ಮಗು ಜನಿಸಿದ್ದು, ವೈದ್ಯರನ್ನು ಚಕಿತಗೊಳಿಸಿದೆ.
ಆಸ್ಪತ್ರೆಯಲ್ಲಿದ್ದ ರೋಗಿಗಳ ಸಂಬಂಧಿಕರು ಮಗು ನೋಡಲು ಮುಗಿಬಿದ್ದರು. ಈ ಸಂದರ್ಭದಲ್ಲಿ ಅವರು 'ದೇವರ ಮಗು' ಎಂದು ಉದ್ಘರಿಸಿದರು. ಕೆಲ ಮಹಿಳೆಯರು ಶಿಶುವಿಗೆ ಕೈ ಮುಗಿದು ಆಶೀರ್ವಾದ ಪಡೆದರು. ಸರಜೂ ದೇವಿಯ ಕುಟುಂಬ ಸದಸ್ಯರು ಹೆಣ್ಣು ಮಗುವನ್ನು ಧೋಲಗಢ ದೇವಿಯ ಅವತಾರ ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸರಜೂ ದೇವಿ ಅವರ ಸಹೋದರ, "ನನ್ನ ಸಹೋದರಿಗೆ ಹೆಣ್ಣು ಮಗು ಜನಿಸಿದೆ. ಮಗುವಿಗೆ 26 ಬೆರಳುಗಳಿವೆ. ನಾವು ಮಗುವನ್ನು ಧೋಲಗಢ ದೇವಿಯ ಅವತಾರವೆಂದು ನಂಬಿದ್ದೇವೆ. ನಮಗೆ ತುಂಬಾ ಸಂತೋಷವಾಗಿದೆ. ಇದು ನಿಜಕ್ಕೂ ಅಪರೂಪ" ಎಂದರು.
ಶಿಶು ಮತ್ತು ಮಕ್ಕಳ ತಜ್ಞ ಡಾ.ಬಿ.ಎಸ್.ಸೋನಿ ಮಾತನಾಡಿ, "ನನ್ನ 32 ವರ್ಷಗಳ ಸೇವಾವಧಿಯಲ್ಲಿ ಕೈಗಳಲ್ಲಿ ಏಳು ಹಾಗೂ ಕಾಲಿನಲ್ಲಿ ಆರು ಬೆರಳುಗಳನ್ನು ಹೊಂದಿರುವ ಮೊದಲ ಶಿಶುವನ್ನು ಕಂಡಿದ್ದೇನೆ. ಆರು ಬೆರಳುಗಳನ್ನು ಹೊಂದಿರುವ ಮಕ್ಕಳು ಬಹಳಷ್ಟಿದ್ದಾರೆ. ಮಗುವಿಗೆ 26 ಬೆರಳುಗಳಿವೆ. ಇಂಥ ವಿದ್ಯಮಾನ ಇದೇ ಮೊದಲು. ಮಗುವಿನ ಬೆರಳುಗಳಿಗೆ ಯಾವುದೇ ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವಿಲ್ಲ. ಇವು ನೈಸರ್ಗಿಕ ಬೆರಳುಗಳು. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಪೋಷಕರ ತಪ್ಪಿನಿಂದ ಮಗು ತೊಂದರೆ ಅನುಭವಿಸಬಾರದು: ಜನನ ಪ್ರಮಾಣ ಪತ್ರ ಸರಿಪಡಿಸಲು ಹೈಕೋರ್ಟ್ ಸೂಚನೆ