ದೌಸಾ(ರಾಜಸ್ಥಾನ):ರಾಜ್ಯದಲ್ಲಿ ಸೋಮವಾರ ನಸುಕಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿತು. ದುರಂತದಲ್ಲಿ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 24 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಎಂ ಸೇರಿದಂತೆ ಎಲ್ಲಾ ಉನ್ನತ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಮಾಹಿತಿ ಕಲೆ ಹಾಕಿದರು.
ಈ ಅಪಘಾತ ರಾಷ್ಟ್ರೀಯ ಹೆದ್ದಾರಿ 21ರಲ್ಲಿ ಸಂಭವಿಸಿತು. ಪ್ರಯಾಣಿಕರ ಬಸ್ ತಡೆಗೊಡೆಗೆ ಡಿಕ್ಕಿ ಹೊಡೆದು ಕೆಳಗಿನ ರೈಲ್ವೆ ಹಳಿ ಮೇಲೆ ಬಿದ್ದಿದೆ. ಇದರಿಂದಾಗಿ ರೈಲುಗಳ ಸಂಚಾರವೂ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ದೌಸಾ ಡಿಎಂ ಕಮರ್ ಚೌಧರಿ ಪ್ರಕಾರ, ನಸುಕಿನ ಜಾವ 2.15 ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ-21 ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಹರಿದ್ವಾರದಿಂದ ಜೈಪುರ ಕಡೆಗೆ ಹೋಗುತ್ತಿದ್ದ ಪ್ಯಾಸೆಂಜರ್ ಬಸ್ ನಿಯಂತ್ರಣ ತಪ್ಪಿ ಕಬ್ಬಿಣದ ರೇಲಿಂಗ್ ಮುರಿದು ಕೆಳಗೆ ಬಿದ್ದಿದೆ. ಬಸ್ ನೇರವಾಗಿ ಜೈಪುರ ದೆಹಲಿ ರೈಲ್ವೆ ಮಾರ್ಗದ ಹಳಿ ಮೇಲೆ ಬಿದ್ದಿದೆ. ಬಸ್ ರೈಲು ಹಳಿ ಮೇಲೆ ಬಿದ್ದಿರುವ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲೆಯಲ್ಲಿ ಆತಂಕ ಸೃಷ್ಟಿಯಾಗಿದ್ದು, ಪೊಲೀಸರು ಹಾಗೂ ಆಂಬ್ಯುಲೆನ್ಸ್ ವಾಹನಗಳು ಸ್ಥಳಕ್ಕೆ ಧಾವಿಸಿದ್ದವು ಎಂದು ಹೇಳಿದರು.
ಅಪಘಾತದ ಬಗ್ಗೆ ರೈಲ್ವೆ ನಿಯಂತ್ರಣ ಕೊಠಡಿಗೆ ಮಾಹಿತಿ ಬಂದ ಕೂಡಲೇ ರೈಲುಗಳ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸಲಾಯಿತು. ರೈಲ್ವೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿ ಘಟನೆಯ ಬಗ್ಗೆ ಪರಿಶೀಲಿಸಿದರು. ಅಪಘಾತದ ನಂತರ, ಜಿಆರ್‌ಪಿ, ಆರ್‌ಪಿಎಫ್ ಸೇರಿದಂತೆ ಹಲವು ಪೊಲೀಸ್ ಠಾಣೆಗಳ ಪೊಲೀಸರು ಸ್ಥಳಕ್ಕೆ ಧಾವಿಸಿ ಬಸ್‌ನಿಂದ ಮೃತರನ್ನು ಮತ್ತು ಗಾಯಾಳುಗಳನ್ನು ಹೊರತೆಗೆದರು. ಗಾಯಾಳುಗಳನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಯಿತು. ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.