ಅಲ್ವಾರ್:ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಗುರುದ್ವಾರವೊಂದರ ಮಾಜಿ 'ಗ್ರಂಥಿ'ಯೊಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಥಳಿಸಿ, ಅವರ ಕೂದಲನ್ನು ಕತ್ತರಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. 'ಗ್ರಂಥಿ' ಎಂದರೆ ಗುರುದ್ವಾರವೊಂದರಲ್ಲಿ ಸಿಖ್ಖರ ಪವಿತ್ರ ಗ್ರಂಥವಾದ ಶ್ರೀ ಗುರು ಗ್ರಂಥ ಸಾಹಿಬ್‌ನನ್ನು ಓದುವರು. ಗುರುವಾರ ರಾತ್ರಿ ಗುರುಬಕ್ಷ ಸಿಂಗ್ ಬೈಕ್ನಲ್ಲಿ ಅಲವಾಡ ಗ್ರಾಮಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಗುರುಬಕ್ಷ ಸಿಂಗ್ ಈಟಿವಿ ಭಾರತದ ಜೊತೆ ಮಾತನಾಡಿ, ನಾನು ಔಷಧ ಖರೀದಿಸಿ ಮಿಲಕ್‌ಪುರದಿಂದ ಬರುತ್ತಿದ್ದೆ. ಕೆಲವರು ಕೈ ಅಡ್ಡ ಹಾಕಿ ನನ್ನನ್ನು ಅಡ್ಡಗಟ್ಟಿದರು. ನಂತರ ಅವರು ನನ್ನನ್ನು ಪಕ್ಕಕ್ಕೆ ಕರೆದೊಯ್ದು, ನನ್ನ ಕಣ್ಣಿಗೆ ಕಾರದ ಪುಡಿ ಎರಚಿದರು. ನಂತರ ಅವರು ನನ್ನ ಕೂದಲನ್ನು ಕತ್ತರಿಸಿದರು ಎಂದರು. ಈ ಸಂಬಂಧ ರಾಮಗಢ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.