ಟೋಂಕ್ (ರಾಜಸ್ಥಾನ): 93 ವರ್ಷದ ವಯೋವೃದ್ಧ ಅರ್ಚಕನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಟೋಂಕ್ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಮಂಹತ್ ಸೀಯರಾಮ್ ದಾಸ್ ಬಾಬಾ ಎಂಬವರೇ ಹತ್ಯೆಯಾದ ಅರ್ಚಕ ಎಂದು ಗುರುತಿಸಲಾಗಿದೆ. ಘಟನೆ ಖಂಡಿಸಿ ಸ್ಥಳೀಯರು ಬುಧವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಡಿಗ್ಗಿ ಪ್ರದೇಶದ ಬುರ್ಯಾ ಮಹಾದೇವ್ ದೇವಸ್ಥಾನದ ಸಮೀಪ ಮಂಗಳವಾರ-ಬುಧವಾರದ ಮಧ್ಯರಾತ್ರಿ ಸೀಯರಾಮ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಸುಮಾರು 50 ವರ್ಷಗಳಿಂದಲೂ ಅರ್ಚಕ ಇಲ್ಲಿಯೇ ವಾಸವಾಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಬುಧವಾರ ಈ ಕೊಲೆಯ ವಿಷಯ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜಶ್ರೀ ರಾಜ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಧಿವಿಜ್ಞಾನ ತಂಡ ಕೂಡ ಘಟನಾ ಸ್ಥಳದಲ್ಲಿ ಮಾಹಿತಿ ಸಂಗ್ರಹಿಸಿದೆ.
ಇದನ್ನೂ ಓದಿ:ಜಮೀನು ವಿವಾದ: ಗುದ್ದಲಿಯಿಂದ ಹೊಡೆದು ಅಣ್ಣ, ಅತ್ತಿಗೆಯನ್ನೇ ಕೊಂದು ಪೊಲೀಸ್ ಠಾಣೆಗೆ ಬಂದ ತಮ್ಮ
''ಅರ್ಚಕನ ಮೃತದೇಹ ಪತ್ತೆಯಾದ ಬಗ್ಗೆ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ಸಿಕ್ತು. ಅಂತೆಯೇ, ನಾನು ಹಾಗೂ ನಮ್ಮ ಪೊಲೀಸ್ ತಂಡ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದೇವೆ. ಹತ್ಯೆಯ ಬಗ್ಗೆ ಸ್ಥಳೀಯವಾಗಿ ಹೆಚ್ಚಿನ ಮಾಹಿತಿ ಸಹ ಸಂಗ್ರಹಿಸಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯಕೀಯ ತಂಡವನ್ನು ರಚಿಸಲಾಗಿದೆ'' ಎಂದು ಎಸ್ಪಿ ಜಯಶ್ರೀ ರಾಜ್ ತಿಳಿಸಿದರು.
''ಅರ್ಚಕನ ಹಂತಕರ ಪತ್ತೆಗೆ ತಮ್ಮ ಪೊಲೀಸ್ ತಂಡ ಶ್ರಮಿಸುತ್ತಿದೆ. ವಿಶೇಷ ತಂಡಗಳನ್ನೂ ರಚನೆ ಮಾಡಲಾಗಿದೆ. ಈಗಾಗಲೇ ಘಟನಾ ಸ್ಥಳದಲ್ಲಿ ಕೆಲವು ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಇದರ ಆಧಾರದ ಮೇಲೆ ತನಿಖೆ ಮುಂದುವರೆಸಲಾಗುತ್ತಿದೆ. ಸ್ಥಳೀಯವಾಗಿ ಸಿಸಿಟಿವಿ ದೃಶ್ಯಾವಳಿಯನ್ನೂ ತಮ್ಮ ತಂಡ ಪರಿಶೀಲನೆ ನಡೆಸುತ್ತಿದೆ'' ಎಂದು ಅವರು ಮಾಹಿತಿ ನೀಡಿದ್ದಾರೆ.
ಹತ್ಯೆಯ ವಿಷಯ ತಿಳಿದು ಸ್ಥಳದಲ್ಲಿ ಅನೇಕರು ಜನರು ಜಮಾವಣೆಗೊಂಡಿದ್ದರು. ಅಲ್ಲದೇ, ಸ್ಥಳೀಯ ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ ಮಾಡಿ, ತಕ್ಷಣವೇ ಆರೋಪಿಗಳನ್ನು ಪತ್ತೆ ಹಚ್ಚಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು. ಇದೇ ವೇಳೆ, ಟೋಂಕ್-ಸಾವೈ ಮಾಧೋಪುರ ಕ್ಷೇತ್ರದ ಸಂಸದ ಸುಖ್ಬಿರ್ ಸಿಂಗ್ ಜೌನಾಪುರಿಯಾ ಮಾತನಾಡಿ, ಪೂಜಾರಿಯ ಹತ್ಯೆ ಘಟನೆಯನ್ನು ಖಂಡಿಸಿದರು. ಅಲ್ಲದೇ, "ರಾಜಸ್ಥಾನದಲ್ಲಿ ಯಾರೂ ಕೂಡ ಸುರಕ್ಷಿತವಾಗಿಲ್ಲ" ಎಂದು ಸಂಸದರು ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ದೆಹಲಿಯಲ್ಲಿ ಅಮೆಜಾನ್ ಹಿರಿಯ ಮ್ಯಾನೇಜರ್ಗೆ ಗುಂಡಿಕ್ಕಿ ಹತ್ಯೆ