ಜೈಪುರ(ರಾಜಸ್ಥಾನ):ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸಲು ಸೂಚಿತರಾಗಿದ್ದಾಗ, ಈ ವೇಳೆ ಬಂಡೆದ್ದು ರಾಜೀನಾಮೆ ನೀಡಿದ್ದ 91 ಕಾಂಗ್ರೆಸ್ ಶಾಸಕರ 3 ತಿಂಗಳ ಸಂಬಳ, ಭತ್ಯೆ, ಸೌಲಭ್ಯಗಳನ್ನು ಹಿಂಪಡೆಯಬೇಕು ಎಂದು ಬಿಜೆಪಿ ಸಲ್ಲಿಸಿದ ಅರ್ಜಿಯ ವಿಚಾರಣೆ ಹೈಕೋರ್ಟ್ನಲ್ಲಿ ಜನವರಿ 2 ರಂದು ವಿಚಾರಣೆ ನಡೆಯಲಿದೆ.
ಪ್ರತಿಪಕ್ಷ ನಾಯಕ ಬಿಜೆಪಿಯ ರಾಜೇಂದ್ರ ಸಿಂಗ್ ರಾಥೋಡ್ ಅವರು ಶಾಸಕರ ರಾಜೀನಾಮೆಯನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಲು ಹೈಕೋರ್ಟ್ ಒಪ್ಪಿಗೆ ನೀಡಿದೆ.
ಬಿಜೆಪಿಯ ಆರೋಪವೇನು?:ಸೆಪ್ಟೆಂಬರ್ನಲ್ಲಿ ಕಾಂಗ್ರೆಸ್ ಶಾಸಕರು ಹೈಕಮಾಂಡ್ ನಿರ್ಧಾರಕ್ಕೆ ಬೇಸತ್ತು ಗೆಹ್ಲೋಟ್ ಪಾಳಯದ 91 ಶಾಸಕರು ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿ, ವಿಧಾನಸಭೆ ಸ್ಪೀಕರ್ಗೆ ಪತ್ರವನ್ನು ರವಾನಿಸಿದ್ದರು. ಇದನ್ನು ಸ್ಪೀಕರ್ ಮಾನ್ಯ ಅಥವಾ ಅಮಾನ್ಯಗೊಳಿಸದೇ ತಟಸ್ಥವಾಗಿಟ್ಟಿದ್ದಾರೆ.
ಬಳಿಕ ಮೂರು ತಿಂಗಳಾದರೂ, ಈ ಬಗ್ಗೆ ನಿರ್ಣಯ ತೆಗೆದುಕೊಂಡಿಲ್ಲ. ಈ ವೇಳೆ ಎಲ್ಲ ಶಾಸಕರು ಸರ್ಕಾರದಿಂದ ಸಂಬಳ, ಭತ್ಯೆ, ಸೌಕರ್ಯಗಳನ್ನು ಪಡೆದುಕೊಂಡಿದ್ದಾರೆ. ಇದು ಕಾನೂನುಬಾಹಿರ. ರಾಜೀನಾಮೆ ನೀಡಿದ ಬಳಿಕ ಅದನ್ನು ಇತ್ಯರ್ಥ ಮಾಡದೇ ಪಡೆದಿರುವ 3 ತಿಂಗಳ ಸರ್ಕಾರದ ಎಲ್ಲ ಸೌಲಭ್ಯಗಳನ್ನು ವಾಪಸ್ ಪಡೆದು ಅದನ್ನು ಖಜಾನೆಗೆ ಜಮಾ ಮಾಡಬೇಕು.
ಅಲ್ಲದೇ, ಜನರು ನೀಡಿದ ತೀರ್ಪನ್ನು ಏಕಮೇವವಾಗಿ ಧಿಕ್ಕರಿಸಿ ರಾಜೀನಾಮೆ ನೀಡಿದ ಎಲ್ಲ ಶಾಸಕರ ಹೆಸರನ್ನು ಬಹಿರಂಗ ಮಾಡಬೇಕು. ಸ್ವಾರ್ಥ ರಾಜಕಾರಣಿಗಳು ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಮತದಾರರ ಭಾವನೆಗಳೊಂದಿಗೆ ಆಡಿದ ಆಟ ಇದಾಗಿದೆ. ಇದು ಎಲ್ಲರಿಗೂ ತಿಳಿಯಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಸ್ಪೀಕರ್ ಪಡೆದ ಒಂದು ಸಾಲಿನ ರಾಜೀನಾಮೆ ಪತ್ರಕ್ಕೆ ಎಲ್ಲ ಶಾಸಕರು ಅಧಿಕೃತವಾಗಿ ಸಹಿ ಹಾಕಿದ್ದಾರೆ. ಹಾಗಾಗಿ ಅವರು ರಾಜೀನಾಮೆಯನ್ನು ಒಮ್ಮತವಾಗಿ ಒಪ್ಪಿಕೊಂಡಂತಾಗಿದೆ. ಇದನ್ನು ವಿಧಾನಸಭಾಧ್ಯಕ್ಷರು ಇದನ್ನು 90 ದಿನಗಳಾದರೂ ಇತ್ಯರ್ಥ ಮಾಡಿಲ್ಲ. ಒಂದು ರೀತಿ ಇದು ರಾಜೀನಾಮೆ ಅಂಗೀಕಾರ ಮಾಡಿದಂತೆಯೇ ಲೆಕ್ಕ ಎಂಬುದು ಬಿಜೆಪಿಯ ವಾದವಾಗಿದೆ.
ಓದಿ:ಪಿಎಂ ಮೋದಿ ತಾಯಿ ಹೀರಾಬೆನ್ ನಿಧನಕ್ಕೆ ಕಂಬನಿ ಮಿಡಿದ ಅಮೆರಿಕ ಅಧ್ಯಕ್ಷ ಬೈಡನ್