ಜೈಪುರ (ರಾಜಸ್ಥಾನ):ದೇಶದಲ್ಲಿ ಕ್ರಿಕೆಟ್ ವಿಶ್ವಕಪ್ ಜ್ವರ ಜೋರಾಗಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾಜಸ್ಥಾನ ಕಾಂಗ್ರೆಸ್ ಘಟಕವು ಕ್ರಿಕೆಟ್ ತಂಡದಂತಿದ್ದು, ಅವರ ಬ್ಯಾಟರ್ಗಳು ಐದು ವರ್ಷಗಳ ಕಾಲ ಪರಸ್ಪರ ರನ್ ಔಟ್ ಮಾಡಲು ಪ್ರಯತ್ನಿಸಿದರು ಎಂದು ಹೇಳಿದ್ದಾರೆ.
ರಾಜಸ್ಥಾನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುರು ಜಿಲ್ಲೆಯ ತಾರಾನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಂದ್ರ ರಾಥೋಡ್ ಪರವಾಗಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಮುಂಬರುವ ರಾಜಸ್ಥಾನ ಚುನಾವಣೆಯಲ್ಲಿ ರಾಜ್ಯದ ವೇಗದ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಬಿಜೆಪಿಗೆ ಮತ ನೀಡುವಂತೆ ಜನರಿಗೆ ಕರೆ ನೀಡಿದರು.
ಇದೇ ವೇಳೆ, ಕ್ರಿಕೆಟ್‌ನಲ್ಲಿ ಒಬ್ಬ ಬ್ಯಾಟರ್ ಬಂದು ತನ್ನ ತಂಡಕ್ಕಾಗಿ ರನ್ ಗಳಿಸುತ್ತಾನೆ. ಆದರೆ, ಕಾಂಗ್ರೆಸ್‌ನೊಳಗೆ ತುಂಬಾ ಆಂತರಿಕ ಕಚ್ಚಾಟವಿದೆ. ಕಾಂಗ್ರೆಸ್ ನಾಯಕರು ರನ್ ಗಳಿಸುವ ಬದಲು ಐದು ವರ್ಷಗಳ ಕಾಲ ಪರಸ್ಪರ ರನ್ ಔಟ್ ಮಾಡುವುದರಲ್ಲೇ ಪ್ರಯತ್ನಿಸಿದರು ಎನ್ನುವ ಮೂಲಕ ಪಿಎಂ ಮೋದಿ ಅವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಅಧಿಕಾರ ಕಿತ್ತಾಟವನ್ನು ಉಲ್ಲೇಖಿಸಿದರು.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾವನ್ನು ಎದುರಿಸಿದೆ. ಈ ಪಂದ್ಯ ಆರಂಭಕ್ಕೂ ಮುನ್ನ ಮೋದಿ ಈ ರೀತಿ ಹೇಳಿಕೆ ನೀಡಿದ್ದು, ಗಮನಾರ್ಹವಾಗಿದೆ. ಅಲ್ಲದೇ, ಕಾಂಗ್ರೆಸ್ ಮತ್ತು ಅಭಿವೃದ್ಧಿ ಎಂಬುದು ಪರಸ್ಪರ ಶತ್ರುಗಳು, ಇವು ಶತ್ರುಗಳಾಗಿ ಉಳಿಯುತ್ತವೆ ಎಂದು ಟೀಕಿಸಿದರು.