ಜೈಪುರ (ರಾಜಸ್ಥಾನ):ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶುಕ್ರವಾರ ರಾಜೇಂದ್ರ ಗುಧಾ ಅವರನ್ನು ರಾಜ್ಯ ಸಚಿವ ಸ್ಥಾನದಿಂದ ವಜಾ ಮಾಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ರಾಜ್ಯ ಸರ್ಕಾರವನ್ನು ಟೀಕಿಸಿದ ಕೆಲವೇ ಗಂಟೆಗಳ ಈ ಬೆಳವಣಿಗೆ ನಡೆದಿದೆ.
ರಾಜೇಂದ್ರ ಗುಧಾ ಅವರು ಸೈನಿಕ ಕಲ್ಯಾಣ್ (ಸ್ವತಂತ್ರ ಉಸ್ತುವಾರಿ), ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣೆ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾಗಿದ್ದರು. ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತರಲಾಯಿತು. ಹೈಕಮಾಂಡ್ನಿಂದ ಹಸಿರು ನಿಶಾನೆ ಸಿಕ್ಕ ತಕ್ಷಣವೇ ಸಿಎಂ ಗೆಹ್ಲೋಟ್, ಗುಧಾ ಅವರನ್ನು ವಜಾಗೊಳಿಸಲು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರಿಗೆ ಸಚಿವ, ಪರಿಷತ್ ಸದಸ್ಯ ರಾಜೇಂದ್ರ ಗುಧಾ ಅವರನ್ನು ಸಂಜೆಯೊಳಗೆ ವಜಾಗೊಳಿಸುವಂತೆ ಶಿಫಾರಸು ಮಾಡಿದ್ದಾರೆ. ರಾಜ್ಯಪಾಲರು ಈ ಶಿಫಾರಸನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಿದ್ದಾರೆ ಎಂದು ರಾಜಭವನದ ವಕ್ತಾರರು ತಿಳಿಸಿದ್ದಾರೆ. ಮತ್ತೊಂದೆಡೆ, ತಮ್ಮನ್ನು ವಜಾಗೊಳಿಸಿದ ನಂತರ ರಾಜೇಂದ್ರ ಗುಧಾ ಸುದ್ದಿಗಾರರೊಂದಿಗೆ ಮಾತನಾಡಿ, ಮಹಿಳೆಯರ ಮೇಲಿನ ಅಪರಾಧಗಳಲ್ಲಿ ರಾಜಸ್ಥಾನ ನಂಬರ್ ಒನ್ ಸ್ಥಾನದಲ್ಲಿದೆ. ನಾನೇನು ಹೇಳಿದ್ದೆ?, ಸತ್ಯ ಹೇಳಿದ್ದಕ್ಕೆ ನನಗೆ ಶಿಕ್ಷೆಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.