ನವದೆಹಲಿ:ರಾಜಸ್ಥಾನದಲ್ಲಿ ವರ್ಷಾಂತ್ಯ ವಿಧಾನಸಭೆ ಚುನಾವಣೆ ನಡೆಯಲಿದ್ದು, ಗೆಲ್ಲಲು ಅನುಮಾನವಿರುವ ಕ್ಷೇತ್ರಗಳಲ್ಲಿ ಕಠಿಣ ತಾಲೀಮು ನಡೆಸಲು ಪಕ್ಷದ ನಾಯಕ ರಾಹುಲ್ ಗಾಂಧಿ ಮುಖಂಡರು, ಕಾರ್ಯಕರ್ತರಿಗೆ ಟಾಸ್ಕ್ ನೀಡಿದ್ದಾರೆ. ಜೊತೆಗೆ ಆ ಕ್ಷೇತ್ರಗಳ ಮಾಹಿತಿಯನ್ನು ನೀಡಲು ಸೂಚಿಸಲಾಗಿದೆ. ಇವುಗಳ ಮೇಲೆ ಹೈಕಮಾಂಡ್ ನೇರವಾಗಿ ನಿಗಾ ವಹಿಸಲಿದೆ ಎಂದು ಪಕ್ಷ ಹೇಳಿದೆ.
ರಾಜಸ್ಥಾನದ ಸ್ಕ್ರೀನಿಂಗ್ ಕಮಿಟಿ ಮುಖ್ಯಸ್ಥ ಗೌರವ್ ಗೊಗೊಯ್ ಅವರಿಗೆ ಈ ಹೊಣೆಯನ್ನು ನೀಡಲಾಗಿದೆ. ಆಗಸ್ಟ್ 28 ರಿಂದ 31 ರವರೆಗೆ ರಾಜಸ್ಥಾನದ ಎಲ್ಲ 200 ಅಸೆಂಬ್ಲಿ ಸ್ಥಾನಗಳನ್ನು ಜಾಲಾಡಿ, ಕಷ್ಟಕರವಾದ 52 ಸ್ಥಾನಗಳಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣಗಳನ್ನು ಕಂಡು ಹಿಡಿಯಬೇಕಿದೆ. ಸ್ಥಳೀಯ ಕಾರ್ಯಕರ್ತರ ಪ್ರತಿಕ್ರಿಯೆ ಸಂಗ್ರಹ, ಸಂಭಾವ್ಯ ಅಭ್ಯರ್ಥಿಗಳ ಗುರುತಿಸಿ ಗೆಲ್ಲುವ ಬಗ್ಗೆಯೂ ತಂತ್ರ ರೂಪಿಸಲು ಸೂಚಿಸಲಾಗಿದೆ.
ಗೆಲ್ಲಲು ಅನುಮಾನವಿರುವ ಮತ್ತು ಕಠಿಣ ಸ್ಪರ್ಧೆ ಏರ್ಪಡುವ ಕ್ಷೇತ್ರಗಳಲ್ಲಿ ಪ್ರವಾಸ ನಡೆಸಿ ಗ್ರೌಂಡ್ ರಿಪೋರ್ಟ್ ಸಿದ್ಧಪಡಿಸಲು ಎಐಸಿಸಿ ರಾಜ್ಯ ಉಸ್ತುವಾರಿ ಕಾರ್ಯದರ್ಶಿಗಳಾದ ನಿಜಾಮುದ್ದೀನ್ ಖಾಜಿ, ವೀರೇಂದ್ರ ರಾಥೋಡ್ ಮತ್ತು ಅಮೃತಾ ಧವನ್ ಅವರಿಗೆ ಹೊಣೆ ನೀಡಲಾಗಿದೆ. ಸ್ಪರ್ಧೆ ನೀಡುವ ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನ, ಅಲ್ಲಿ ಬಿಜೆಪಿಗೆ ಕಠಿಣ ಹೋರಾಟ ನೀಡಬೇಕು ಎಂದು ಪಕ್ಷ ತಿಳಿಸಿದೆ.
ಸರ್ಕಾರಿ ಯೋಜನೆಗಲೇ ಪ್ಲಸ್ ಪಾಯಿಂಟ್:ಈ ಬಗ್ಗೆ ಮಾತನಾಡಿರುವ ವೀರೇಂದ್ರ ರಾಥೋಡ್, ನನ್ನ ಉಸ್ತುವಾರಿಗೆ ಒಳಪಡುವ ಮಾರ್ವಾರ್-ಮೇವಾರ ಪ್ರದೇಶದಲ್ಲಿ ಬರುವ 70 ಸೀಟುಗಳಲ್ಲಿ ಸುಮಾರು 40 ಕ್ಷೇತ್ರಗಳು ಪಕ್ಷಕ್ಕೆ ಕಠಿಣವಾಗಿವೆ. ಇಲ್ಲಿ ಹೆಚ್ಚಿನ ಶ್ರಮವನ್ನು ಹಾಕುತ್ತಿದ್ದೇವೆ. ಅವುಗಳಲ್ಲಿ ಅರ್ಧದಷ್ಟಾದರೂ ಗೆಲ್ಲಲು ಪ್ರಯತ್ನಿಸಲಾಗುವುದು. ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು. ಮತದಾರರು ಹೆಚ್ಚಾಗಿ ಕಾಂಗ್ರೆಸ್ ಸರ್ಕಾರದ ಯೋಜನೆಗಳ ಪರವಾಗಿದ್ದಾರೆ. ಈ ಬಾರಿಯೂ ಪಕ್ಷವನ್ನೇ ಬೆಂಬಲಿಸಲಿದ್ದಾರೆ. ಅದರಲ್ಲೂ ಆರೋಗ್ಯ ಭದ್ರತೆಯ ವಿಚಾರ ಸರ್ಕಾರ ಬಹುಮುಖ್ಯ ಯೋಜನೆಯಾಗಿದೆ ಎಂದು ಅವರು ಹೇಳಿದರು.
ಬಹುತೇಕ ಕಠಿಣ ಸ್ಥಾನಗಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲು ಕಾಂಗ್ರೆಸ್ ಯೋಜಿಸುತ್ತಿದೆ. ಶ್ರೀಗಂಗಾನಗರ, ಗಂಗಾಪುರ ನಗರ, ಅನುಪ್ಗಢ, ಭದ್ರಾ, ಬಿಕಾನೇರ್ ಪೂರ್ವ, ಪಿಲಿಬಂಗಾ, ಸಂಗನೇರ್, ಮಾಳವೀಯ ನಗರ, ಕಪಾಸನ್, ವಿದ್ಯಾಧರ್ ನಗರ, ಜಲೋರ್, ದಗ್, ಝಲ್ರಪಟನ್, ಖಾನ್ಪುರ್, ಮನೋಹರ್ ಠಾಣಾ, ಉದಯಪುರವತಿ, ರಾಮಗಂಜ್ ಮಂಡಿ, ಮಾರ್ವಾರ್ ಜಂಕ್ಷನ್, ಮಲ್ಪುರ, ರೆವ್ದರ್, ನಾಗೌರ್, ರತನ್‌ಗಢ್, ಖಂಡೇಲಾ, ಅಜ್ಮೀರ್ ಉತ್ತರ, ಅಜ್ಮೀರ್ ಸೌತ್, ಭರತ್‌ಪುರ್, ಅಲ್ವಾರ್ ಸಿಟಿ, ಬೆಹ್ರೋಡ್, ಭಿಲ್ವಾರಾ, ಬುಂಡಿ, ಕೋಟಾ, ಸಿರೋಹಿ, ಭೋಪಾಲ್‌ಗಢ್, ಇತ್ಯಾದಿ ಕ್ಷೇತ್ರಗಳಿವೆ.
ಬಿಜೆಪಿಯಿಂದ ವಲಸೆ ಬಂದಿರುವ ಗೋವಿಂದ್ ರಾಮ್ ಮೇಘವಾಲ್ ನೇತೃತ್ವದ ಪ್ರಚಾರ ಸಮಿತಿಯು ತನ್ನ ಮೊದಲ ಸಭೆಯನ್ನು ಸೋಮವಾರ ನಡೆಸಿತು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸ್ಕ್ರೀನಿಂಗ್ ಕಮಿಟಿ ಮುಖ್ಯಸ್ಥ ಗೌರವ್ ಗೊಗೊಯ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ:ಯುಪಿಐ ಮೂಲಕ ಸ್ವತಃ ಹಣ ಪಾವತಿಸಿ ಚಹಾ ಸವಿದ ನೆದರ್ಲ್ಯಾಂಡ್ ಪ್ರಧಾನಿ ಮಾರ್ಕ್ ರುಟ್ಟೆ