ಜೈಪುರ (ರಾಜಸ್ಥಾನ):ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಅಂತಿಮ ಹಂತಕ್ಕೆ ಬಂದಿವೆ. ಮಿಜೋರಾಂ, ಛತ್ತೀಸ್ಗಢ ಮತ್ತು ಮಧ್ಯಪ್ರದೇಶದಲ್ಲಿ ಈಗಾಗಲೇ ಮತದಾನ ಪೂರ್ಣಗೊಂಡಿದೆ. ರಾಜಸ್ಥಾನದ ಮತದಾರರು ಇಂದು (ಶನಿವಾರ) ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧಾರ ಮಾಡಲಿದ್ದಾರೆ.
ರಾಜಸ್ಥಾನದ 200 ವಿಧಾನಸಭೆ ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಿಗೆ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಮತದಾನ ಮುಕ್ತಾಯಗೊಳ್ಳಲಿದೆ. ಎಲ್ಲ ಕೇಂದ್ರಗಳಲ್ಲೂ ಮತದಾನ ನಡೆಯುತ್ತಿದೆ. ಮಧ್ಯಾಹ್ನ 1 ಗಂಟೆವರೆಗೆ ಶೇ.40.27ರಷ್ಟು ಮತದಾನವಾಗಿದೆ.
ಮತ ಚಲಾಯಿದ ವಿವಿಧ ಗಣ್ಯರು:ರಾಜಸ್ಥಾನದಲ್ಲಿ ಚುನಾವಣಾ ಆಯೋಗವು 51,507 ಮತಗಟ್ಟೆಗಳನ್ನು ಸ್ಥಾಪಿಸಿದೆ. ಅಲ್ಲದೆ, ರಾಜ್ಯದ 5,26,90,146 ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಈ ಚುನಾವಣೆ ಹಬ್ಬದಲ್ಲಿ ಭಾಗವಹಿಸಲಿದ್ದಾರೆ. ಶಾಂತಿಯುತವಾಗಿ ಮತದಾನ ನಡೆಸಲು ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇದೇ ವೇಳೆ, ರಾಜ್ಯದ ಮುಖ್ಯಮಂತ್ರಿ ಮತ್ತು ಸರ್ದಾರ್‌ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಗೆಹ್ಲೋಟ್ ಅವರು ತಮ್ಮ ಕುಟುಂಬದೊಂದಿಗೆ ಮಹಾಮಂದಿರದಲ್ಲಿನ ವರ್ಧಮಾನ್ ಜೈನ ವಿದ್ಯಾಲಯದ ಬೂತ್ ಸಂಖ್ಯೆ 111ರಲ್ಲಿ ಮತ ಚಲಾಯಿಸಿದರು.
ಮಾಜಿ ಸಿಎಂ ವಸುಂಧರಾ ರಾಜೆ ಅವರು, ಜಲಾವರ್ ನಗರದ ಹೌಸಿಂಗ್ ಬೋರ್ಡ್ ಸಮುದಾಯ ಭವನದಲ್ಲಿ ಸ್ಥಾಪಿಸಲಾದ ಮತಗಟ್ಟೆ ಸಂಖ್ಯೆ 32ರಲ್ಲಿ ಮತ ಚಲಾಯಿಸಿದರು. ಕೋಟಾದಲ್ಲಿ ಲೋಕಸಭಾ ಸ್ಪೀಕರ್ ಮತದಾನ ಮಾಡಿದರು. ಜೋಧ್‌ಪುರದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ ಚಲಾಯಿಸಿದರೆ, ಅಸ್ಸೋಂ ರಾಜ್ಯಪಾಲ ಗುಲಾಬ್‌ಚಂದ್ ಕಟಾರಿಯಾ ಅವರು ರಾಜಸ್ಥಾನ ಹೌಸಿಂಗ್ ಬೋರ್ಡ್ ಕಚೇರಿ ಹಿರಾನ್ ಮ್ಯಾಗ್ರಿಯಲ್ಲಿರುವ ಬೂತ್ ಸಂಖ್ಯೆ 107ರಲ್ಲಿ ಮತ ಚಲಾಯಿಸಿದರು.