ಜೋಧ್ಪುರ್ (ರಾಜಸ್ಥಾನ) : ಪಂಚರಾಜ್ಯ ವಿಧಾನಸಭೆ ಚುನಾವಣೆಯ ಪೈಕಿ ನಾಲ್ಕು ರಾಜ್ಯಗಳ ಫಲಿತಾಂಶ ಈಗಾಗಲೇ ಹೊರಬಿದ್ದಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢದಲ್ಲಿ ಬಿಜೆಪಿ ಗೆದ್ದು ಬೀಗಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ.
ಮತ್ತೊಂದೆಡೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷದ ಸೋಲನ್ನು ಸ್ವೀಕರಿಸಿರುವ ಸಿಎಂ ಅಶೋಕ್ ಗೆಹ್ಲೋಟ್ ಅವರು ಇಂದು ಸಂಜೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. 5.30ರ ಸುಮಾರಿಗೆ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ. ರಾಜ್ಯದಲ್ಲಿ 114 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿದ್ದು, ಆಡಳಿತಾರೂಢ ಕಾಂಗ್ರೆಸ್ 70 ಸ್ಥಾನಕ್ಕೆ ಕುಸಿದಿದೆ. ಇತರರು 15 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಸಿಎಂ ಅಶೋಕ್ ಗೆಹ್ಲೋಟ್ಗೆ ಜಯ :ಸರ್ದಾರ್ಪುರ್ ವಿಧಾನಸಭಾ ಕ್ಷೇತ್ರದಿಂದ ಸ್ಫರ್ಧಿಸಿದ್ದ ಸಿಎಂ ಅಶೋಕ್ ಗೆಹ್ಲೋಟ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇವರು ಬಿಜೆಪಿಯ ಮಹೇಂದ್ರ ಸಿಂಗ್ ರಾಥೋರ್ ವಿರುದ್ಧ ಗೆಲುವು ಸಾಧಿಸಿದರು. ಗೆಹ್ಲೋಟ್ ಅವರು 95,409 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ 69,521 ಮತಗಳನ್ನು ಗಳಿಸಿ 25,888 ಮತಗಳ ಅಂತರದಿಂದ ಸೋಲನುಭವಿಸಿದರು.
ಸರ್ದಾರ್ಪುರ್ ವಿಧಾನಸಭಾ ಕ್ಷೇತ್ರವು ತೀವ್ರ ಪೈಪೋಟಿಗೆ ಕಾರಣವಾಗಿತ್ತು. ಈ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಸತತ ಗೆಲುವು ದಾಖಲಿಸಿದ್ದರು. ಒಟ್ಟು 6 ಬಾರಿ ಈ ಕ್ಷೇತ್ರದಿಂದ ಅಶೋಕ್ ಗೆಹ್ಲೋಟ್ ಗೆಲುವು ಸಾಧಿಸಿದ್ದಾರೆ. ಗೆಹ್ಲೋಟ್ 1977ರಲ್ಲಿ ಮೊದಲ ಬಾರಿಗೆ ಸರ್ದಾರ್ಪುರ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು, ಬಳಿಕ ಇದೇ ಕ್ಷೇತ್ರದಿಂದ ಸತತವಾಗಿ ಸ್ಪರ್ಧಿಸುತ್ತಾ ಬರುತ್ತಿದ್ದಾರೆ.
1998ರಲ್ಲಿ ಕಾಂಗ್ರೆಸ್ ನಾಯಕ ಮಾನ್ಸಿಂಗ್ ದೋರಾ ಅವರು ಅಶೋಕ್ ಗೆಹ್ಲೋಟ್ ಅವರಿಗೆ ಈ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದರು. ದೋರಾ ಅವರ ರಾಜೀನಾಮೆ ನಂತರ ಅಶೋಕ್ ಗೆಹ್ಲೋಟ್ ಇಲ್ಲಿ ನಡೆದ ಉಪಚುನಾವಣೆಯಲ್ಲಿ ಗೆದ್ದು, ಮೊದಲ ಬಾರಿಗೆ ಶಾಸಕರಾಗಿದ್ದರು. ಇದಕ್ಕೂ ಮುನ್ನ ಗೆಹ್ಲೋಟ್ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. 1998ರ ಉಪಚುನಾವಣೆ ನಂತರ ಗೆಹ್ಲೋಟ್ ಸರ್ದಾರ್ಪುರ್ ಕ್ಷೇತ್ರದಿಂದ ಸತತ ಆರು ಬಾರಿ ಸ್ಪರ್ಧಿಸಿ ಶಾಸಕರಾಗಿದ್ದಾರೆ.
ಗೆಹ್ಲೋಟ್ಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯು ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೆ ಅವರ ಆಪ್ತರಾದ ಪ್ರೊ. ಮಹೇಂದ್ರ ಸಿಂಗ್ ರಾಥೋರ್ ಅವರನ್ನು ಕಣಕ್ಕೆ ಇಳಿಸಿತ್ತು. ಅದರೆ ಬಿಜೆಪಿ ಲೆಕ್ಕಾಚಾರ ಮತ್ತು ರಾಥೋರ್ ಪ್ರಭಾವ ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ. ಇದರಿಂದಾಗಿ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ರಾಥೋರ್ ಸೋಲನ್ನು ಅನುಭವಿಸಿದ್ದಾರೆ.
ಇದನ್ನೂ ಓದಿ :ರಾಜಸ್ಥಾನದಲ್ಲಿ ಬಿಜೆಪಿಗೆ ಅಧಿಕಾರ: ಆಧ್ಯಾತ್ಮಿಕ ನಾಯಕನಿಗೆ ಸಿಎಂ ಹುದ್ದೆ?