ಭರತಪುರ( ರಾಜಸ್ಥಾನ):ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉಚಿತ ಧಾನ್ಯ ವಿತರಣೆ ಯೋಜನೆ ಮುಂದಿನ 5 ವರ್ಷಗಳ ಕಾಲ ಮುಂದುವರೆಯಲಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು. ಇಂದು ರಾಜಸ್ಥಾನದ ಭರತಪುರದಲ್ಲಿ ನಡೆದ 'ವಿಜಯ್ ಸಂಕಲ್ಪ' ಸಾರ್ವಜನಿಕ ಸಭೆಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದರು.
ಕೊರೊನಾ ಸಮಯದಲ್ಲಿ ನಮ್ಮ ಸರ್ಕಾರ ಜಾರಿಗೆ ತಂದಿರುವ ಉಚಿತ ಧಾನ್ಯ ವಿತರಣೆ ಯೋಜನೆ ಇದೇ ಡಿಸೆಂಬರ್ನಲ್ಲಿ ಪೂರ್ಣಗೊಳ್ಳಲಿದೆ. ಆದರೆ, ಪ್ರತಿಯೊಬ್ಬ ಬಡವನ ಮನೆಯಲ್ಲಿ ಒಲೆ ಉರಿಬೇಕು, ಯಾರೊಬ್ಬರು ಹಸಿವಿನಿಂದ ಬಳಲಬಾರದು ಎಂಬ ದೃಷ್ಟಿಯಿಂದ ಈ ಉಚಿತ ಧಾನ್ಯ ವಿತರಣೆ ಯೋಜನೆಯನ್ನು ಮುಂದಿನ 5 ವರ್ಷಗಳ ಕಾಲ ವಿಸ್ತರಿಸಲಾಗಿದೆ ಎಂದು ಹೇಳಿದರು.
ಈ ವಿಚಾರವಾಗಿ ನನ್ನ ವಿರುದ್ಧ ಚುನಾವಣಾ ಆಯೋಗದಲ್ಲಿ ದೂರು ದಾಖಲಾಗಿದೆ. ಆದರೆ, ಬಡವರ ಹೊಟ್ಟೆಪಾಡಿಗಾಗಿ ನಾನು ಜೈಲಿಗೆ ಹೋಗಲೂ ಸಿದ್ದ ಎಂದು ಇದೇ ವೇಳೆ ಹೇಳಿದರು.
ಪೆಟ್ರೋಲ್ನಿಂದ ಹಣ ಲೂಟಿ:ರಾಜಸ್ಥಾನದ ಕಾಂಗ್ರೆಸ್ ಸರ್ಕಾರಪೆಟ್ರೋಲ್ ನಿಂದ ಹಣ ಲೂಟಿ ಮಾಡುವ ಮೂಲಕ ತನ್ನ ನಾಯಕರ ಬೊಕ್ಕಸ ತುಂಬಿಸುತ್ತಿದೆ. ನೆರೆಯ ರಾಜ್ಯಗಳಿಗೆ ಹೋಲಿಸಿದರೆ ರಾಜಸ್ಥಾನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ತುಂಬಾ ದುಬಾರಿಯಾಗಿದೆ. ಪರಭಕ್ಷಕ ಸರಕಾರದಿಂದ ಇಲ್ಲಿ ಪೆಟ್ರೋಲ್ ದುಬಾರಿಯಾಗಿದೆ. ಬೆಲೆ ಇಳಿಸಲು ಇಲ್ಲಿನ ಸರ್ಕಾರ ಸಿದ್ಧವಿಲ್ಲ. ನೆರೆಯ ರಾಜ್ಯಗಳಾದ ಹರಿಯಾಣ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 97 ರೂ., ಇದ್ದರೆ ರಾಜಸ್ಥಾನದಲ್ಲಿ ಪೆಟ್ರೋಲ್ ಬೆಲೆ 109ರೂ ಇದೆ. ರಾಜಸ್ಥಾನದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ದಿನವೇ ಪೆಟ್ರೋಲ್ ಬೆಲೆಯನ್ನು ಪರಿಶೀಲಿಸಿ ಸಾರ್ವಜನಿಕ ಹಿತಾಸಕ್ತಿಯಿಂದ ಸಾಧ್ಯವಾದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.