ಕರ್ನಾಟಕ

karnataka

ETV Bharat / bharat

ಫಾರೂಕ್ ಅಬ್ದುಲ್ಲಾ ಪುತ್ರಿ ಸಾರಾ-ಸಚಿನ್ ಪೈಲಟ್​ ವಿಚ್ಛೇದನ: ಚುನಾವಣಾ ಅಫಿಡವಿಟ್‌ನಲ್ಲಿ ಬಹಿರಂಗ! - ರಾಜಸ್ಥಾನ ವಿಧಾನಸಭೆ ಚುನಾವಣೆ

Sachin Pilot states his wife as divorcee: ಜಮ್ಮು-ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರ ಪುತ್ರಿಯಾದ ಸಾರಾ ಅವರೊಂದಿಗೆ ವಿಚ್ಛೇದನ ಪಡೆದಿರುವುದಾಗಿ ಕಾಂಗ್ರೆಸ್​ ನಾಯಕ ಸಚಿನ್ ಪೈಲಟ್ ಬಹಿರಂಗಪಡಿಸಿದ್ದಾರೆ.

rajasthan-assembly-election-2023-congress-leader-sachin-pilot-states-his-wife-as-divorcee-in-affidavit-during-nomination
ಫಾರೂಕ್ ಅಬ್ದುಲ್ಲಾ ಪುತ್ರಿ ಸಾರಾ-ಸಚಿನ್ ಪೈಲಟ್​ ವಿಚ್ಛೇದನ: ಚುನಾವಣಾ ಅಫಿಡವಿಟ್‌ನಲ್ಲಿ ಬಹಿರಂಗ!

By ETV Bharat Karnataka Team

Published : Oct 31, 2023, 6:36 PM IST

Updated : Oct 31, 2023, 7:18 PM IST

ಜೈಪುರ (ರಾಜಸ್ಥಾನ):ರಾಜಸ್ಥಾನ ಕಾಂಗ್ರೆಸ್​ನ ಪ್ರಮುಖ ನಾಯಕ, ಕೇಂದ್ರದ ಮಾಜಿ ಸಚಿವ ಸಚಿನ್ ಪೈಲಟ್​ ಅವರು ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದಿರುವ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಪ್ರಸ್ತುತ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಟೋಂಕ್​ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಸಚಿನ್ ಪೈಲಟ್​ ತಮ್ಮ ಅಫಿಡವಿಟ್‌ನಲ್ಲಿ ಈ ವಿಷಯ ಉಲ್ಲೇಖಿಸಿದ್ದಾರೆ.

ನ್ಯಾಷನಲ್​ ಕಾನ್ಫರೆನ್ಸ್ ನಾಯಕ, ಜಮ್ಮು-ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರ ಮಗಳು ಮತ್ತು ಒಮರ್ ಅಬ್ದುಲ್ಲಾ ಅವರ ಸಹೋದರಿ ಸಾರಾ ಅವರನ್ನು 2004ರಲ್ಲಿ ಸಚಿನ್​ ಪೈಲಟ್​ ವಿವಾಹವಾಗಿದ್ದರು. ಈ ದಂಪತಿಗೆ ಅರಾನ್ ಪೈಲಟ್ ಮತ್ತು ವಿಹಾನ್ ಪೈಲಟ್ ಎಂಬಿಬ್ಬರು ಮಕ್ಕಳಿದ್ದಾರೆ. ಸಚಿನ್ ಪೈಲಟ್​ ಹಾಗೂ ಸಾರಾ ನಡುವಿನ ದಾಂಪತ್ಯದ ಬಿರುಕಿನ ಬಗ್ಗೆ ಹಲವು ಬಾರಿ ವರದಿಗಳು ಪ್ರಕಟಗೊಂಡಿದ್ದವು. ಇದನ್ನು ಸಚಿನ್ ಪೈಲಟ್​ ತಿರಸ್ಕರಿಸುತ್ತಲೇ ಬಂದಿದ್ದರು. ಆದರೆ, ಇದೇ ಮೊದಲ ಬಾರಿಗೆ ತಮ್ಮ ವಿಚ್ಛೇದನವನ್ನು ಸಾರ್ವಜನಿಕವಾಗಿ ಘೋಷಿಸಿದ್ದಾರೆ.

2018ರ ಚುನಾವಣಾ ಅಫಿಡವಿಟ್‌ನಲ್ಲಿ ಸಾರಾ ಪೈಲಟ್​ ಅವರನ್ನು ತಮ್ಮ ಪತ್ನಿ ಎಂದು ಸಚಿನ್​ ಪೈಲಟ್ ಉಲ್ಲೇಖಿಸಿದ್ದರು. ಈ ಬಾರಿ ಪತಿಯ ಸ್ಥಳದಲ್ಲಿ ವಿಚ್ಛೇದನ ಎಂದು ತಿಳಿಸಿದ್ದಾರೆ. ಈ ಅಫಿಡವಿಟ್‌ನಲ್ಲಿ ಯಾವಾಗ ವಿಚ್ಛೇದನವಾಯಿತು ಎಂಬುದು ತಿಳಿದಿಲ್ಲ. ಇಬ್ಬರು ಮಕ್ಕಳ ಜವಾಬ್ದಾರಿ ತಮ್ಮ ಮೇಲಿದೆ ಎಂದು ಮಾತ್ರ ಅವರು ನಮೂದಿಸಿದ್ದಾರೆ.

ಸಚಿನ್ ಪೈಲಟ್​ ಸಲ್ಲಿಸಿರುವ ಅಫಿಡವಿಟ್‌

ಪ್ರೀತಿಸಿ ಮದುವೆಯಾಗಿದ್ದ ಸಚಿನ್-ಸಾರಾ:ರಾಜಸ್ಥಾನ ಕಾಂಗ್ರೆಸ್​ನ ಮಾಜಿ ಅಧ್ಯಕ್ಷ, ಕಾರ್ಯಕಾರಿ ಸಮಿತಿ ಸದಸ್ಯರಾದ ಸಚಿನ್ ಪೈಲಟ್ ಹಾಗೂ ಫಾರೂಕ್ ಅಬ್ದುಲ್ಲಾ ಪುತ್ರಿ ಸಾರಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಶಾಲೆಯಲ್ಲಿ ಓದುತ್ತಿದ್ದಾಗ ಸಚಿನ್ ಹಾಗೂ ಸಾರಾ ನಡುವೆ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು.

ಆದರೆ, ಇವರ ಮದುವೆಗೆ ಅಬ್ದುಲ್ಲಾ ಮನೆಯವರು ಬಹಳ ದಿನಗಳ ಕಾಲ ಒಪ್ಪಿಗೆ ಸೂಚಿಸಿರಲಿಲ್ಲ. ಆದರೆ, ಸಚಿನ್ ಪೈಲಟ್ ತಮ್ಮ 26ನೇ ವಯಸ್ಸಿನಲ್ಲಿ ದೌಸಾ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾಗಿ ದೇಶದ ಯುವ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರವಾದರು. ಇದು ಪರಿಸ್ಥಿತಿ ಬದಲಿಸಿ ದಾಂಪತ್ಯಕ್ಕೆ ಕಾಲಿಟ್ಟರು. ಮದುವೆಯಾದ 10 ವರ್ಷಗಳ ನಂತರ ಇಬ್ಬರ ನಡುವಿನ ಸಂಬಂಧದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾಧ್ಯಮ ವರದಿಗಳು ಬಿತ್ತರಗೊಂಡರು.

ಇದರ ನಡುವೆ 2018ರ ರಾಜಸ್ಥಾನ ವಿಧಾನಸಭೆ ಚುನಾವಣಾ ಫಲಿತಾಂಶದ ಸಂದರ್ಭದಲ್ಲಿ ಇಬ್ಬರು ಒಟ್ಗೆಟಿಗೆ ಕಾಣಿಸಿಕೊಂಡು ಮಾಧ್ಯಮ ವರದಿಗಳನ್ನು ತಳ್ಳಿಹಾಕುವ ಪ್ರಯತ್ನ ಮಾಡಿದ್ದರು. ಆಗ ಉಪಮುಖ್ಯಮಂತ್ರಿಯಾಗಿ ಸಚಿನ್ ಪೈಲಟ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾರಾ ಪೈಲಟ್ ತಮ್ಮ ಇಬ್ಬರು ಪುತ್ರರೊಂದಿಗೆ ಸಾಕ್ಷಿಯಾಗಿದ್ದರು.

ರಾಜಕೀಯದ ಹೊರತಾಗಿ ಸಚಿನ್ ಪೈಲಟ್ ದೇಶ ಸೇವೆಯ ಒಲವು ಹೊಂದಿದ್ದು, ಸೇನೆಯ ಕ್ಯಾಪ್ಟನ್ ಆಗಿದ್ದಾರೆ. ಇತ್ತೀಚೆಗಷ್ಟೇ ಸೇನೆಗೆ ಸಂಬಂಧಿಸಿದ ಲಿಖಿತ ಪರೀಕ್ಷೆಯನ್ನೂ ಬರೆದಿದ್ದಾರೆ. ಅದರಲ್ಲಿ ಉತ್ತೀರ್ಣರಾದರೆ ಮೇಜರ್ ಹುದ್ದೆಗೆ ಬಡ್ತಿ ಪಡೆಯಲಿದ್ದಾರೆ. ಈ ಬಡ್ತಿ ಪರೀಕ್ಷೆಗೆ ಹಾಜರಾಗಿದ್ದಾಗ ಅವರು ಸೇನಾಧಿಕಾರಿಗಳನ್ನು ಭೇಟಿ ಮಾಡಿದ್ದರು. ರಾಜಸ್ಥಾನದ 200 ಸದಸ್ಯ ಬಲದ ವಿಧಾನಸಭೆಗೆ ನ.25ರಂದು ಚುನಾವಣೆ ನಡೆಯಲಿದೆ. ಈಗ ಆಡಳಿತದಲ್ಲಿರುವ ಕಾಂಗ್ರೆಸ್​ ಮತ್ತೆ ಅಧಿಕಾರಕ್ಕೆ ಬಂದರೆ ಸಚಿನ್ ಪೈಲಟ್​ಮುಖ್ಯಮಂತ್ರಿಯಾಗುವ ಚರ್ಚೆಗಳು ನಡೆಯುತ್ತಿವೆ.

ಇದನ್ನೂ ಓದಿ:ನಾನು ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ಬಯಸಿದರೂ ಆ ಹುದ್ದೆ ನನ್ನನ್ನು ಬಿಡುತ್ತಿಲ್ಲ: ಅಶೋಕ್ ಗೆಹ್ಲೋಟ್

Last Updated : Oct 31, 2023, 7:18 PM IST

ABOUT THE AUTHOR

...view details